ಇ.ಡಿ.ಯ ಪ್ರಭಾರ ಮುಖ್ಯಸ್ಥರಾಗಿ ರಾಹುಲ್ ನವೀನ್ ನೇಮಕ
IRS officer Rahul Navin| PHOTO: Twitter
ಹೊಸದಿಲ್ಲಿ: 1993ನೇ ಬ್ಯಾಚಿನ ಐ ಆರ್ ಎಸ್ ಅಧಿಕಾರಿ ರಾಹುಲ್ ನವೀನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ಪ್ರಭಾರ ಮುಖ್ಯಸ್ಥರನ್ನಾಗಿ ಕೇಂದ್ರ ಸರಕಾರ ಶುಕ್ರವಾರ ನೇಮಕ ಮಾಡಿದೆ.
ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನವೀನ್ ಅವರನ್ನು ನೇಮಕ ಮಾಡಲಾಗಿದೆ. ನವೀನ್ ಅವರು ನೂತನ ಮುಖ್ಯಸ್ಥರ ನೇಮಕದ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ನವೀನ್ ಸದ್ಯ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರಾಗಿದ್ದಾರೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಮಿಶ್ರಾ ಅವರ ಅಧಿಕಾರಾವಧಿಯನ್ನು ಸುಪ್ರೀಂ ಕೋರ್ಟ್ ಜುಲೈಯಲ್ಲಿ ಸೆಪ್ಟಂಬರ್ 15ರ ವರೆಗೆ ವಿಸ್ತರಿಸಿತ್ತು. ಇದಕ್ಕಿಂತ ಮೊದಲು ಕೇಂದ್ರ ಸರಕಾರ ಮಿಶ್ರಾ ಅವರ ಅಧಿಕಾರವಧಿಯನ್ನು ಎರಡು ಬಾರಿ ವಿಸ್ತರಿಸಿತ್ತು. ಆದರೆ, ಇದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.