ಅಸ್ಸಾಂ: ರಾಹುಲ್ ಗಾಂಧಿಗೆ ದೇವಾಲಯ ಪ್ರವೇಶ ನಿರಾಕರಣೆ
ನಾನು ಯಾವ ಅಪರಾಧ ಮಾಡಿದ್ದೇನೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ (PTI)
ಹೊಸದಿಲ್ಲಿ: ಅಸ್ಸಾಮಿನ 15ನೇ ಶತಮಾನದ ಸಂತ ಹಾಗೂ ವಿದ್ವಾಂಸ ಶ್ರೀಮಂತ ಶಂಕರದೇವರ ಜನ್ಮಸ್ಥಳವಾದ ಬತದ್ರವ ಸತ್ರ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅಸ್ಸಾಂ ಸರ್ಕಾರಿ ಪ್ರಾಧಿಕಾರಗಳು ನನ್ನನ್ನು ತಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಗಾಂವ್ ನಲ್ಲಿ ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ತಮ್ಮ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, “ನಮಗೆ ದೇವಾಲಯಕ್ಕೆ ಭೇಟಿ ನೀಡಬೇಕಿದೆ. ನಾನು ದೇವಾಲಯಕ್ಕೆ ಭೇಟಿ ನೀಡದಿರಲು ನಾನು ಯಾವ ಅಪರಾಧ ಮಾಡಿದ್ದೇನೆ?” ಎಂದು ಪ್ರಶ್ನಿಸಿದ್ದಾರೆ.
“ನಮಗೆ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದು ಬೇಕಿಲ್ಲ. ನಮಗೆ ದೇವಾಲಯದಲ್ಲಿ ಪ್ರಾರ್ಥನೆ ಮಾತ್ರ ಸಲ್ಲಿಸಬೇಕಿದೆ” ಎಂದೂ ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾರು ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ನಿರ್ಧರಿಸಲಿದ್ದಾರೆ. ಕೇವಲ ಓರ್ವ ವ್ಯಕ್ತಿ ಮಾತ್ರ ದೇವಾಲಯವನ್ನು ಪ್ರವೇಶಿಸಬಹುದಾಗಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಘಟನೆಯ ಬೆನ್ನಿಗೇ ರಾಹುಲ್ ಗಾಂಧಿ ನಾಗಾಂವ್ ನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೂ ಮುನ್ನ, ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತೀವ್ರ ಸ್ವರೂಪದ ಗಲಭೆಯಾಗುವ ಸಾಧ್ಯತೆ ಇರುವುದರಿಂದ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯ ಮಾರ್ಗವನ್ನು ಮರು ಪರಿಶೀಲಿಸಬೇಕು ಎಂದು ರವಿವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಆಗ್ರಹಿಸಿದ್ದರು.