ಮಹಿಳಾ ಮೀಸಲು ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ 1,400ಕ್ಕೂ ಹೆಚ್ಚು ಪುರುಷರ ಬಂಧನ : ಈಸ್ಟರ್ನ್ ರೈಲ್ವೆ
PC : PTI
ಕೋಲ್ಕತ್ತಾ: ಅಕ್ಟೋಬರ್ ತಿಂಗಳಲ್ಲಿ ಮಹಿಳಾ ಮೀಸಲು ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ 1,400ಕ್ಕೂ ಹೆಚ್ಚು ಪುರುಷರನ್ನು ಈಸ್ಟರ್ನ್ ರೈಲ್ವೆ ವಲಯದಲ್ಲಿ ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಮೀಸಲು ಬೋಗಿಗಳು ಅಥವಾ ಮಹಿಳಾ ವಿಶೇಷ ರೈಲುಗಳಲ್ಲಿ ಪುರುಷ ಪ್ರಯಾಣಿಕರು ಪ್ರಯಾಣಿಸಕೂಡದು ಎಂದು ಎಚ್ಚರಿಸಿರುವ ಅಧಿಕಾರಿಗಳು, ಏನಾದರೂ ಅನನುಕೂಲವಾದರೆ, ಮಹಿಳಾ ಪ್ರಯಾಣಿಕರು ರಕ್ಷಣೆಗಾಗಿ 139 ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.
ಈಸ್ಟರ್ನ್ ರೈಲ್ವೆ ವಲಯದಲ್ಲಿ ರೈಲ್ವೆ ರಕ್ಷಣಾ ಪಡೆಯು 1,200ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಸಂಬಂಧ ಮಹಿಳಾ ಮೀಸಲು ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ 1,400ಕ್ಕೂ ಹೆಚ್ಚು ಪುರುಷ ಪ್ರಯಾಣಿಕರನ್ನು ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಈ ಪೈಕಿ 262 ಪ್ರಯಾಣಿಕರನ್ನು ಹೌರಾ ವಲಯದಲ್ಲಿ, 574 ಪ್ರಯಾಣಿಕರನ್ನು ಸಿಯಾಲ್ಡಾ ವಲಯದಲ್ಲಿ, 176 ಪ್ರಯಾಣಿಕರನ್ನು ಮಾಲ್ಡಾ ವಲಯದಲ್ಲಿ ಹಾಗೂ 392 ಪ್ರಯಾಣಿಕರನ್ನು ಅಸಾನ್ಸೋಲ್ ವಲಯದಲ್ಲಿ ಬಂಧಿಸಲಾಗಿದೆ ಎಂದು ಪ್ರಕಟಣೆಯೊಂದರಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಮೀಸಲು ಬೋಗಿಗಳಲ್ಲಿ ಪ್ರಯಾಣಿಸಿದ ಪುರುಷ ಪ್ರಯಾಣಿಕರ ವಿರುದ್ಧ ದಂಡ ಮತ್ತು ಬಂಧನದ ಶಿಕ್ಷೆ ಎರಡನ್ನೂ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.