ಟಿಕೆಟ್ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕಲು ʼಟಿಕೆಟ್-ಚೆಕ್ಕಿಂಗ್ ಡ್ರೈವ್ʼ ಆರಂಭಿಸಿದ ರೈಲ್ವೆ ಇಲಾಖೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರೈಲ್ವೆ ಸಚಿವಾಲಯ ಹಬ್ಬದ ಸೀಸನ್ಗಳಲ್ಲಿ ವಿಶೇಷ ʼಟಿಕೆಟ್-ಚೆಕ್ಕಿಂಗ್ ಡ್ರೈವ್ʼ ಪ್ರಾರಂಭಿಸಲು ನಿರ್ಧರಿಸಿದ್ದು, ಪೊಲೀಸರು ಸೇರಿದಂತೆ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಕ್ರಮಕ್ಕೆ ಮುಂದಾಗಿದೆ.
ಈ ಕುರಿತು ರೈಲ್ವೇ ಸಚಿವಾಲಯ ಸೆ.20ರಂದು 17 ವಲಯಗಳ ಜನರಲ್ ಮ್ಯಾನೇಜರ್ಗಳಿಗೆ ಪತ್ರ ಬರೆದಿದೆ. 1989ರ ರೈಲ್ವೆ ಕಾಯಿದೆಯ ನಿಬಂಧನೆಗಳ ಪ್ರಕಾರ ಅ.1ರಿಂದ ಅ.15ರವರೆಗೆ ಮತ್ತು ಅ.25 ರಿಂದ ನ.10ರವರೆಗೆ ಟಿಕೆಟ್ ರಹಿತ ಮತ್ತು ಅನಧಿಕೃತವಾಗಿ ಪ್ರಯಾಣಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಹಬ್ಬದ ಸಮಯದಲ್ಲಿ ಜನಸಾಮಾನ್ಯರು ಮಾತ್ರವಲ್ಲದೆ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ರಹಿತಾಗಿ ಪ್ರಯಾಣಿಸುತ್ತಾರೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ನಾವು ಇತ್ತೀಚೆಗೆ ಗಾಝಿಯಾಬಾದ್ ಮತ್ತು ಕಾನ್ಪುರ ನಡುವೆ ತೆರಳುತ್ತಿದ್ದ ರೈಲುಗಳಲ್ಲಿ ತಪಾಸಣೆ ನಡೆಸಿದಾಗ ಟಿಕೆಟ್ ಇಲ್ಲದೆ ವಿವಿಧ ಎಕ್ಸ್ ಪ್ರೆಸ್ ರೈಲುಗಳ ಎಸಿ ಕೋಚ್ಗಳಲ್ಲಿ ನೂರಾರು ಪೊಲೀಸರು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ನಾವು ಅವರಿಗೆ ದಂಡ ವಿಧಿಸಿದಾಗ, ಅವರು ಮೊದಲು ದಂಡ ಪಾವತಿಸಲು ನಿರಾಕರಿಸಿ ಬೆದರಿಕೆ ಹಾಕಿದ್ದರು, ಆದರೆ ನಾವು ಅವರಿಂದ ದಂಡ ವಸೂಲಿ ಮಾಡಿದ್ದೇವೆ. ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ನೋಡಿ ಸಹಪ್ರಯಾಣಿಕರಿಗೆ ಕೂಡ ಸಂತಸವಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.