ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಿಂದ ಮೃತ್ಯು ಪ್ರಕರಣ | ಪೊಲೀಸರಿಂದ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆ

PC: PTI
ಹೊಸದಿಲ್ಲಿ: ಇಲ್ಲಿನ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಿಂದ ಕನಿಷ್ಠ 18 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿಲ್ಲಿ ಪೊಲೀಸರು ರವಿವಾರ ತನಿಖೆ ಆರಂಭಿಸಿದ್ದಾರೆ.
ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಲು ಕಾರಣವಾದ ಅಂಶವನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
"ಕಾಲ್ತುಳಿತಕ್ಕೆ ಕಾರಣವಾದ ಪ್ರಮುಖ ಕಾರಣವನ್ನು ತನಿಖೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಆ ಸಮಯದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರಕಟಣೆಗಳ ಎಲ್ಲಾ ಅಂಶಗಳನ್ನು ನಾವು ಸಂಗ್ರಹಿಸುತ್ತೇವೆ" ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.
ಪ್ಲಾಟ್ಫಾರ್ಮ್ಗಳ ಬದಲಾವಣೆಯ ಬಗ್ಗೆ ತಪ್ಪು ಘೋಷಣೆಯು ಗೊಂದಲಕ್ಕೆ ಕಾರಣವಾಗಿರಬಹುದು. ಅದರಿಂದ ಕಾಲ್ತುಳಿತಕ್ಕೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.
ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್ ಗೆ ರೈಲುಗಳನ್ನು ಹತ್ತಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಗುಂಪಿನಲ್ಲಿ ಕಾಲ್ತುಳಿತ ಸಂಭವಿಸಿದೆ.
ಮೃತರಲ್ಲಿ 14 ಮಹಿಳೆಯರು, ಐದು ಮಂದಿ ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಅವರಲ್ಲಿ ಇಬ್ಬರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನಲಾಗಿದೆ.
ಕಾಲ್ತುಳಿತದಲ್ಲಿ ಸುಮಾರು 15 ಜನರು ಗಾಯಗೊಂಡಿದ್ದು, ಅವರಿಗೆ ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಿಲ್ಲಿ ಹಂಗಾಮಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ರೈಲು ವಿಳಂಬದಿಂದಾಗಿ ಪ್ಲಾಟ್ಫಾರ್ಮ್ಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.