ಶೌಚಾಲಯದಲ್ಲಿ ನೀರಿಲ್ಲ | ಪ್ರಯಾಣಿಕನಿಗೆ 25,000 ಪರಿಹಾರ : ರೈಲ್ವೆಗೆ ಬಳಕೆದಾರರ ಆಯೋಗ ಆದೇಶ
PC ; PTI
ಹೊಸದಿಲ್ಲಿ : ರೈಲು ಪ್ರಯಾಣದ ವೇಳೆ ಅನುಭವಿಸಿದ ಅನಾನುಕೂಲಕ್ಕಾಗಿ ಓರ್ವ ಪ್ರಯಾಣಿಕನಿಗೆ 25,000 ರೂಪಾಯಿ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣಮ್ ನ ಜಿಲ್ಲಾ ಬಳಕೆದಾರರ ಆಯೋಗವು ದಕ್ಷಿಣ ಮಧ್ಯ ರೈಲ್ವೇ (ಎಸ್ಸಿಆರ್)ಗೆ ಆದೇಶ ನೀಡಿದೆ.
ತಾವು ಪ್ರಯಾಣಿಸಿದ ತಿರುಮಲ ಎಕ್ಸ್ಪ್ರೆಸ್ ರೈಲಿನ ಶೌಚಾಲಯಗಳಲ್ಲಿ ನೀರಿರಲಿಲ್ಲ ಮತ್ತು ವಾತಾನುಕೂಲಿ ವ್ಯವಸ್ಥೆಯು ಕೆಲಸ ಮಾಡುತ್ತಿರಲಿಲ್ಲ ಎಂಬುದಾಗಿ ಪ್ರಯಾಣಿಕ ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದರಿಂದಾಗಿ ತಾವು ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುವಂತಾಯಿತು ಎಂದು ಅವರು ಹೇಳಿದ್ದಾರೆ.
ಈ ಅನಾನುಕೂಲಗಳ ಬಗ್ಗೆ ದುವ್ವಡದಲ್ಲಿರುವ ಸಂಬಂಧಿತ ಕಚೇರಿಯಲ್ಲಿ ದೂರು ನೀಡಿದರೂ, ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ ಎಂದು ದೂರುದಾರರು ತನ್ನ ದೂರಿನಲ್ಲಿ ಹೇಳಿದ್ದಾರೆ.
ಆದರೆ, ರೈಲ್ವೇ ಅಧಿಕಾರಿಗಳು ರೈಲು ಪ್ರಯಾಣಿಕರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಾರ್ವಜನಿಕ ಹಣವನ್ನು ಕೊಳ್ಳೆಹೊಡೆಯಲು ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದರು.
ರೈಲ್ವೇಯು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಭರವಸೆಯೊಂದಿಗೆ ಪ್ರಯಾಣ ದರ ಸಂಗ್ರಹಿಸುತ್ತಿರುವುದರಿಂದ ಶೌಚಾಲಯಗಳಲ್ಲಿ ನೀರು, ವಾತಾನುಕೂಲಿ ವ್ಯವಸ್ಥೆ ಮತ್ತು ಸೂಕ್ತ ಪರಿಸರ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವ ಬದ್ಧತೆಯನ್ನು ಅದು ಹೊಂದಿದೆ ಎಂದು ಜಿಲ್ಲಾ ಬಳಕೆದಾರರ ವಿವಾದಗಳ ಪರಿಹಾರ ಆಯೋಗ-1 (ವಿಶಾಖಪಟ್ಟಣಮ್) ತೀರ್ಪು ನೀಡಿದೆ.
ರೈಲು ಪ್ರಯಾಣದ ವೇಳೆ ಅನುಭವಿಸಿದ ಅನಾನುಕೂಲತೆಗಾಗಿ ದೂರುದಾರರಿಗೆ 25,000 ರೂ. ಪರಿಹಾರ ಮತ್ತು ವ್ಯಾಜ್ಯದ ವೆಚ್ಚವಾಗಿ 5,000 ರೂ. ನೀಡುವಂತೆ ಆಯೋಗವು ರೈಲ್ವೇಸ್ಗೆ ಆದೇಶ ನೀಡಿತು.