ತೆಲಂಗಾಣ ಮತ್ತು ಆಂಧ್ರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
Photo: indiatoday.in
ಹೈದರಾಬಾದ್/ಅಮರಾವತಿ: ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರೊಂದಿಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನೆರೆಯ ತೆಲಂಗಾಣದಲ್ಲಿ ಸನ್ನದ್ಧ ಸ್ಥಿತಿಯನ್ನು ಘೋಷಿಸಲಾಗಿದೆ.
ಆಂಧ್ರ ಪ್ರದೇಶದಲ್ಲುಂಟಾಗಿರುವ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನಿಷ್ಠ ಎಂಟು ಮಂದಿ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. ತಗ್ಗುಪ್ರದೇಶದ ಹಲವಾರು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಕೋಪ ಪರಿಹಾರ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಸುಮಾರು 80 ಮಂದಿಯನ್ನು ರಕ್ಷಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಶನಿವಾರದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ರದ್ದುಪಡಿಸಿದ್ದು, ಅವರು ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಪ್ರತಿ ಜಿಲ್ಲೆಗಳಿಗೆ ರೂ. 3 ಕೋಟಿಯನ್ನು ಬಿಡುಗಡೆ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರೈಲು ಸೇವೆ ಅಸ್ತವ್ಯವಸ್ತ
ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ವಿಜಯವಾಡ-ವಾರಂಗಲ್ ಮಾರ್ಗದ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ.
ಸ್ಥಳೀಯ ತೊರೆಯೊಂದು ಉಕ್ಕೇರಿ ಹರಿದ ಪರಿಣಾಮ ವಿಜಯವಾಡ ಬಳಿಯ ಹಳಿಯೊಂದು ಮುಳುಗಿ ಹೋಗಿದ್ದರಿಂದಾಗಿ, ವಿಜಯವಾಡ-ಖಮ್ಮಂ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅದೇ ರೀತಿ, ಉಕ್ಕೇರಿದ ತೊರೆಯಿಂದಾಗಿ ಮಹಬೂಬಾಬಾದ್ ರೈಲ್ವೆ ನಿಲ್ದಾಣದ ಬಳಿಯ ತಂಡಲಪುಸಲಪಲ್ಲಿಯಲ್ಲಿ ರೈಲ್ವೆ ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ವಾರಂಗಲ್-ಖಮ್ಮಂ ಮಾರ್ಗದ ರೈಲು ಸೇವೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ.
ಇದರೊಂದಿಗೆ, ಕೇಸಮುದ್ರಂ ರೈಲ್ವೆ ನಿಲ್ದಾಣದ ಬಳಿಯ ಹಳಿಗಳ ಮೇಲೆ ಮಳೆ ನೀರು ಹರಿಯುತ್ತಿರುವುದರಿಂದ, ಸಮೀಪದ ನಿಲ್ದಾಣಗಳಿಗೆ ತೆರಳುತ್ತಿದ್ದ ರೈಲುಗಳನ್ನು ರೈಲ್ವೆ ಪ್ರಾಧಿಕಾರಗಳು ಸ್ಥಗಿತಗೊಳಿಸಿವೆ.
ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಮುಳುಗಿದ್ದು, ಜಲಾವೃತಗೊಂಡಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯಾದ್ಯಂತ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ವರದಿಗಳೂ ಇವೆ.