ತಮಿಳುನಾಡು ಸಹಿತ 4 ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ: ಐಎಂಡಿ
ಹೊಸದಿಲ್ಲಿ: ತಮಿಳುನಾಡು ಹಾಗೂ ದಕ್ಷಿಣದ ಇತರ ಕೆಲವು ರಾಜ್ಯಗಳಲ್ಲಿ ನ. 18ರ ವರೆಗೆ ಲಘು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ರವಿವಾರ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ನ.12 ಹಾಗೂ ನ. 18ರ ನಡುವೆ ಲಘುವಿನಿಂದ ಕೂಡಿದ ಸಾಮಾನ್ಯ ಮಳೆಯಾಗಲಿದೆ. ಅಲ್ಲದೆ, ರಾಜ್ಯದಲ್ಲಿ ನವೆಂಬರ್ 14 ಹಾಗೂ 15ರಂದು ಮಿಂಚು ಅಥವಾ ಬಿರುಗಾಳಿಯಿಂದ ಕೂಡಿದ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಎಂದು ಹವಾಮಾನ ಇಲಾಖೆಯ ಬುಲೆಟಿನ್ ತಿಳಿಸಿದೆ.
ಕೇರಳ, ಆಂಧ್ರಪ್ರದೇಶದ ಕರಾವಳಿ, ಮಾಹೆ, ಪುದುಚೇರಿ, ಕರ್ನಾಟಕ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಕೂಡ ಇದೇ ರೀತಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಶನಿವಾರ ಕೇರಳದ ತಿರುವನಂತಪುರಂ ಹಾಗೂ ತಮಿಳುನಾಡಿನ ರಾಮನಾಡುವಿನಲ್ಲಿ 3 ಸೆ.ಮೀ. ಮಳೆ ಬಿದ್ದಿದೆ. ಕೋಟ್ಟಾಯಂನಂತಹ ಕೇರಳದ ಇತರ ಜಿಲ್ಲೆಗಳು 2 ಸೆ.ಮೀ. ಮಳೆ ದಾಖಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ರಾಮನಾಥಪುರಂ ಜಿಲ್ಲೆ ಶುಕ್ರವಾರ ಹಾಗೂ ಶನಿವಾರ ಭಾರೀ ಮಳೆ ದಾಖಲಾಗಿದೆ. ತಮಿಳುನಾಡಿನ ತಂಗಚ್ಚಿಮಾಡಂನಲ್ಲಿ 15 ಸೆ.ಮೀ. ಮಳೆ ಬಿದ್ದಿದೆ. ಮಂಡಪಂನಲ್ಲಿ 14 ಸೆ.ಮೀ. ಮಳೆ ಸುರಿದಿರುವುದರಿಂದ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ.