ಪಕ್ಷದ ನಾಯಕರೋರ್ವರು ತಂದ ಗಂಗಾ ಜಲವನ್ನು ನಾನು ಮುಟ್ಟಿಯೂ ನೋಡಿಲ್ಲ : ರಾಜ್ ಠಾಕ್ರೆ
ಮಹಾಕುಂಭದ ವೇಳೆ ಗಂಗಾ ನದಿಯ ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ ಎಂಎನ್ಎಸ್ ಮುಖ್ಯಸ್ಥ

ರಾಜ್ ಠಾಕ್ರೆ (Photo: PTI)
ಮುಂಬೈ : ಮಹಾ ಕುಂಭದ ಸಮಯದಲ್ಲಿ ಗಂಗಾ ನದಿಯ ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ, ನಾನು ನದಿಯಲ್ಲಿ ಸ್ನಾನ ಮಾಡುವುದಿಲ್ಲ. ಮೂಢ ನಂಬಿಕೆಯಿಂದ ಹೊರಬನ್ನಿ ಮತ್ತು ನಿಮ್ಮ ಬುದ್ದಿಯನ್ನು ಸರಿಯಾಗಿ ಬಳಸಿಕೊಳ್ಳಿ. ಮಹಾ ಕುಂಭದ ವೇಳೆ ಪಕ್ಷದ ನಾಯಕರೋರ್ವರು ತಂದ ಗಂಗಾ ಜಲವನ್ನು ನಾನು ಮುಟ್ಟಿಯೂ ನೋಡಿಲ್ಲ ಎಂದು ಹೇಳಿದರು.
ಪಿಂಪ್ರಿ-ಚಿಂಚ್ವಾಡ್ನಲ್ಲಿ ಎಂಎನ್ಎಸ್ನ 19ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ನಾನು ನದಿಯಲ್ಲಿ ಸ್ನಾನ ಮಾಡುವುದಿಲ್ಲ. ಲಕ್ಷಾಂತರ ಜನರು ಸ್ನಾನ ಮಾಡಿದ ನೀರನ್ನು ಮುಟ್ಟಿಯೂ ನೋಡುವುದಿಲ್ಲ ಎಂದು ಹೇಳಿದರು.
ಎಂಎನ್ಎಸ್ ಪಕ್ಷದ ನಾಯಕ ಬಾಲ ನಂದಗಾಂವ್ಕರ್ ಒಮ್ಮೆ ಕುಂಭ ಮೇಳದಿಂದ ಗಂಗಾಜಲವನ್ನು ತಂದು ಕೊಟ್ಟರು. ಅದನ್ನು ನಾನು ಮುಟ್ಟಿಯೂ ನೋಡಲಿಲ್ಲ. ನಾನು ಸ್ನಾನ ಮಾಡಲೇ ಹೋಗಿಲ್ಲ. ಮತ್ತೆ ಆ ನೀರನ್ನು ಯಾರು ಕುಡಿಯುತ್ತಾರೆ? ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಧಿಕಾರಾವಧಿಯಿಂದಲೂ ನದಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಭರವಸೆಗಳನ್ನು ನೀಡಲಾಗಿತ್ತು. ಸತ್ಯವೆಂದರೆ, ದೇಶದ ಯಾವುದೇ ನದಿ ಸ್ವಚ್ಛವಾಗಿಲ್ಲ. ದೇಶವು ಇದೀಗ ಸಾಂಕ್ರಾಮಿಕ ರೋಗದಿಂದ ಹೊರಬಂದಿದೆ. ಆದರೂ ಜನರು ಕುಂಭ ಮೇಳಕ್ಕೆ ಧಾವಿಸುತ್ತಿದ್ದಾರೆ. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ಮೂಢ ನಂಬಿಕೆಯನ್ನು ನಿಲ್ಲಿಸಿ ಮತ್ತು ಯೋಚಿಸಲು ಪ್ರಾರಂಭಿಸಿ ಎಂದು ಹೇಳಿದರು.
ಕುಂಭ ಮೇಳಕ್ಕೆ ತೆರಳಿದ ಕಾರಣ ಪಕ್ಷದ ಹಲವಾರು ಪದಾಧಿಕಾರಿಗಳು ಎಂಎನ್ಎಸ್ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರಲ್ಲಿ ನೀವು ಏಕೆ ಹೋಗಿದ್ದೀರಿ? ನೀವು ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದೀರಾ? ಎಂದು ನಾನು ಕೇಳಿದೆ ಎಂದು ವ್ಯಂಗ್ಯವಾಗಿ ಹೇಳಿದರು.
ಭಾರತದ ನದಿಗಳನ್ನು ವಿದೇಶದಲ್ಲಿರುವ ನದಿಗಳಿಗೆ ಹೋಲಿಸಿದ ಠಾಕ್ರೆ, ತಾಯಿ ಎಂದು ಪೂಜಿಸಲ್ಪಡದಿದ್ದರೂ ವಿದೇಶದಲ್ಲಿರುವ ನದಿಗಳು ಹೆಚ್ಚು ಸ್ವಚ್ಛವಾಗಿರುತ್ತವೆ. ನಾವು ವಿದೇಶ ಪ್ರವಾಸ ಮಾಡುವಾಗ ಸ್ಫಟಿಕದಂತಹ ಸ್ವಚ್ಛವಾದ ನದಿಗಳನ್ನು ನೋಡುತ್ತೇವೆ. ಆದರೆ, ನಮ್ಮ ದೇಶದಲ್ಲಿ ಎಲ್ಲಾ ಕಲುಷಿತ ನೀರನ್ನು ನದಿಗಳಿಗೆ ಬಿಡಲಾಗುತ್ತದೆ ಎಂದು ಹೇಳಿದರು.