ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾಗಳನ್ನು ಕಸಿದುಕೊಂಡು ಬೆಂಕಿ ಹಚ್ಚಿದ ದುಷ್ಕರ್ಮಿಗಳ ಗುಂಪು
PC : PTI
ಟೋಂಕ್: ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾರನ್ನು ಬಂಧಿಸಿದ ಕ್ರಮವನ್ನು ಪ್ರತಿಭಟಿಸಿ, ಅವರ ಬೆಂಬಲಿಗರು ನಡೆಸಿದ ಹಿಂಸಾತ್ಮಕ ದಾಂಧಲೆಯ ಸಂದರ್ಭದಲ್ಲಿ ಓರ್ವ ಪಿಟಿಐ ವರದಿಗಾರ ಹಾಗೂ ವಿಡಿಯೊ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿ, ಅವರನ್ನು ಗಾಯಗೊಳಿಸಿರುವ ಘಟನೆ ಗುರುವಾರ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ.
ಈ ಹಲ್ಲೆಯಿಂದ ವರದಿಗಾರ ಅಜೀತ್ ಶೆಖಾವತ್ ಹಾಗೂ ಕ್ಯಾಮೆರಾಮನ್ ಧರ್ಮೇಂದ್ರ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕ್ಯಾಮೆರಾವನ್ನು ಕಿತ್ತುಕೊಂಡಿರುವ ದುಷ್ಕರ್ಮಿಗಳ ಗುಂಪು, ಅದಕ್ಕೆ ಬೆಂಕಿಯನ್ನೂ ಹಚ್ಚಿದೆ.
ದಿಲ್ಲಿಯ ತಮ್ಮ ಮುಖ್ಯ ಕಚೇರಿಗೆ ಶೆಖಾವತ್ ರವಾನಿಸಿರುವ ಸೆಲ್ಫಿ ವಿಡಿಯೊದಲ್ಲಿ ಅವರ ಎಡಗಣ್ಣಿನ ಕೆಳಗೆ ರಕ್ತ ಸೋರುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ತಮ್ಮ ಸಹೋದ್ಯೋಗಿ ಧರ್ಮೇಂದ್ರರ ತಲೆಗೆ ತೂತು ಬಿದ್ದಿದ್ದು, ಅವರ ಕೈ ಮುರಿದಿರುವ ಸಾಧ್ಯತೆ ಇದೆ ಎಂದೂ ಶೆಖಾವತ್ ತಮ್ಮ ಸಂಪಾದಕರಿಗೆ ತಿಳಿಸಿದ್ದಾರೆ. ಇಬ್ಬರನ್ನೂ ಅವರ ಸಹೋದ್ಯೋಗಿಯ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ವರದಿಯಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ತೆರಳಿದ್ದ ಕೃಷಿ ಸಚಿವ ಕಿರೋಡಿ ಲಾಲ್ ಮೀನಾರನ್ನು ಸಂದರ್ಶಿಸಲು ಅವರಿಬ್ಬರೂ ಮುಂದಾದಾಗ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಬುಧವಾರ ಸಂಜೆ ಧರಣಿ ನಡೆಸಲು ಮುಂದಾಗಿದ್ದ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನರೇಶ್ ಮೀನಾ ಬೆಂಬಲಿಗರನ್ನು ತಡೆಯಲು ಪೊಲೀಸರು ಯತ್ನಿಸಿದಾಗಿನಿಂದ, ಅಲ್ಲಿ ಹಿಂಸಾಚಾರ ಸ್ಫೋಟಗೊಂಡಿದೆ.
ಇದಕ್ಕೂ ಮುನ್ನ, ಬುಧವಾರದಂದು ಕ್ಯಾಮೆರಾ ಸಿಬ್ಬಂದಿಗಳ ಮುಂದೆಯೇ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಿಭಾಗಾಧಿಕಾರಿ ಮಲ್ಪುರ ಅಮಿತ್ ಚೌಧರಿಗೆ ನರೇಶ್ ಮೀನಾ ಕಪಾಳ ಮೋಕ್ಷ ಮಾಡಿದ್ದರು.