ರಾಜಸ್ಥಾನ | ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ ರೈತನಿಗೆ 9.9 ಲಕ್ಷ ರೂ. ಮೊತ್ತದ ಭದ್ರತಾ ವೆಚ್ಚ ನೋಟಿಸ್ ನೀಡಿದ ಪೊಲೀಸರು!
ಸಾಂದರ್ಭಿಕ ಚಿತ್ರ
ಜೈಪುರ: ನನಗೆ ಜಮೀನು ಪರಿಹಾರ ನೀಡದೆ ಇರುವುದರಿಂದ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ ರಾಜಸ್ಥಾನದ ಝುಂಝುನು ಜಿಲ್ಲೆಯ ರೈತರೊಬ್ಬರಿಗೆ ಅವರನ್ನು ಆತ್ಮಹತ್ಯೆಯ ಪ್ರಯತ್ನದಿಂದ ತಡೆಯುವ ಸಲುವಾಗಿ ಒದಗಿಸಲಾಗಿದ್ದ ಭದ್ರತಾ ವ್ಯವಸ್ಥೆಗಾಗಿ 9.9 ಲಕ್ಷ ರೂ. ಪಾವತಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾಧರ್ ಯಾದವ್ ಎಂಬ ರೈತ, ನವೆಂಬರ್ ತಿಂಗಳಲ್ಲಿ ನವಲ್ ಗಢ್ ನ ಗೊಥಾಡಾ ಗ್ರಾಮದಲ್ಲಿ ಸಿಮೆಂಟ್ ಘಟಕವನ್ನು ನಿರ್ಮಿಸಲು ನನಗೆ ಯಾವುದೇ ಪರಿಹಾರ ನೀಡಿದೆ ನನ್ನ ಮನೆಯನ್ನು ನೆಲಸಮಗೊಳಿಸಿ, ಜಮೀನನ್ನು ವಶಪಡಿಸಿಕೊಂಡಿದ್ದರಿಂದ ನಾನು ಖಿನ್ನನಾಗಿದ್ದೆ ಹಾಗೂ ನನಗೆ ಪೊಲೀಸ್ ಪಡೆಯ ಭದ್ರತಾ ವ್ಯವಸ್ಥೆ ಮಾಡುವಂತೆ ನಾನೆಂದೂ ಕೋರಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ವಿದ್ಯಾಧರ್ ಯಾದವ್ ಗೆ 3.8 ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗಿದೆ.
ಆದರೆ, ಡಿಸೆಂಬರ್ 17ರಂದು ವಿದ್ಯಾಧರ್ ಯಾದವ್ ಗೆ ನೋಟಿಸ್ ಜಾರಿಗೊಳಿಸಿರುವ ಝುಂಝುನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ನಿಮಗೆ ಭದ್ರತೆ ಒದಗಿಸಲು ಓರ್ವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಇಬ್ಬರು ಇನ್ಸ್ ಪೆಕ್ಟರ್ ಗಳು, ಮೂವರು ಸಬ್ ಇನ್ಸ್ ಪೆಕ್ಟರ್ ಗಳು, ಆರು ಮಂದಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳು, 18 ಮಂದಿ ಮುಖ್ಯ ಪೇದೆಗಳು ಹಾಗೂ 67 ಪೇದೆಗಳು ಸೇರಿದಂತೆ 99 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದರಿಂದ, ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ನಿಮಗೆ ವೈಯಕ್ತಿಕ ಭದ್ರತೆ ನೀಡಿದ್ದರಿಂದ, ಭದ್ರತೆಗಾಗಿ ಮಾಡಿರುವ ವೆಚ್ಚವಾದ 9,91,577 ರೂ. ಅನ್ನು ನಿಮ್ಮಿಂದ ವಸೂಲಿ ಮಾಡಬೇಕಿದೆ ಎಂದೂ ಹೇಳಿದ್ದಾರೆ.
“ಭದ್ರತೆಗಾಗಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದರಿಂದ, ಭದ್ರತಾ ವೆಚ್ಚದ ವಸೂಲಾತಿಗಾಗಿ ನೋಟಿಸ್ ಜಾರಿಗೊಳಿಸಲಾಗಿದೆ” ಎಂದು ಝುಂಝುನು ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ತಿಳಿಸಿದ್ದಾರೆ.
ಪರಿಹಾರದ ಕುರಿತು ನನಗೆ ಜಿಲ್ಲಾಡಳಿತ ಹಾಗೂ ಸಿಮೆಂಟ್ ಕಂಪನಿಯ ವ್ಯವಸ್ಥಾಪಕ ಮಂಡಳಿಯಿಂದ ಸೂಕ್ತ ಸ್ಪಂದನೆ ದೊರೆಯದೆ ಹೋಗಿದ್ದರಿಂದ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಡಿಸೆಂಬರ್ 9ರಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೆನಪೋಲೆ ಸಲ್ಲಿಸಿದ್ದೆ ಹಾಗೂ ಡಿಸೆಂಬರ್ 11ರ ಗಡುವು ನೀಡಿದ್ದೆ ಎಂದು ರೈತ ಯಾದವ್ ಹೇಳಿದ್ದಾರೆ.
ಯಾವುದೇ ಪರಿಹಾರ ನೀಡದೆ ನನ್ನ ಮನೆಯನ್ನು ನೆಲಸಮಗೊಳಿಸಿ, ನನ್ನ ಜಮೀನನ್ನು ವಶಪಡಿಸಿಕೊಂಡಿದ್ದರಿಂದ ನನಗೆ ದಯಾಮರಣವಲ್ಲದೆ ಬೇರೆ ಆಯ್ಕೆ ಉಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
“ನನಗೆ ಪರಿಹಾರ ಮೊತ್ತ ಬಿಡುಗಡೆ ಮಾಡುವಂತೆ ನಾನು ಪದೇ ಪದೇ ಜಿಲ್ಲಾಧಿಕಾರಿಗಳು ಹಾಗೂ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅವರಿಂದ ಯಾವುದೇ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ, ನಾನು ದಯಾಮರಣ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೆನಪೋಲೆ ಸಲ್ಲಿಸಿದ್ದೆ ಹಾಗೂ ಡಿಸೆಂಬರ್ 11ರ ಗಡುವು ನೀಡಿದ್ದೆ” ಎಂದು ಅವರು ಹೇಳಿದ್ದಾರೆ.
ರೈತ ವಿದ್ಯಾಧರ್ ಯಾದವ್ ಅಂತಹ ಕ್ರಮ ತೆಗೆದುಕೊಳ್ಳುವುದನ್ನು ತಡೆಯಲು ಡಿಸೆಂಬರ್ 11ರಂದು ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾದವ್ ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡಾಗ, ಅವರ ಆತ್ಮಹತ್ಯೆ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು.
“ನಾನು ಯಾವುದೇ ಭದ್ರತೆಗೆ ಮನವಿ ಮಾಡಿರಲಿಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸರೇ ಭದ್ರತಾ ವ್ಯವಸ್ಥೆ ಮಾಡಿದ್ದರು. ಆದರೀಗ ಪೊಲೀಸ್ ವರಿಷ್ಠಾಧಿಕಾರಿಯು ನನಗೆ ವಸೂಲಾತಿ ನೋಟಿಸ್ ನೀಡಿದ್ದಾರೆ” ಎಂದು ರೈತ ವಿದ್ಯಾಧರ್ ಯಾದವ್ ಆರೋಪಿಸಿದ್ದಾರೆ.