ನೂತನ ಜಿಲ್ಲೆಗಳ ರದ್ದತಿ ವಿರೋಧಿಸಿ ರಾಜಸ್ಥಾನದ ವಿವಿಧೆಡೆ ಪ್ರತಿಭಟನೆ, ಬಂದ್
ಸಾಂದರ್ಭಿಕ ಚಿತ್ರ | PC: PTI
ಜೈಪುರ : ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸೃಷ್ಟಿಸಲಾಗಿದ್ದ 9 ಹೊಸ ಜಿಲ್ಲೆಗಳನ್ನು ರದ್ದುಪಡಿಸುವ ರಾಜ್ಯದ ಬಿಜೆಪಿ ಸರಕಾರದ ನಿರ್ಧಾರವನ್ನು ವಿರೋಧಿಸಿ ರಾಜಸ್ಥಾನದ ವಿವಿಧೆಡೆ ಸೋಮವಾರ ಪ್ರತಿಭಟನೆ ನಡೆಯಿತು.
9 ಜಿಲ್ಲೆಗಳನ್ನು ರದ್ದುಪಡಿಸುವ ನಿರ್ಧಾರವನ್ನು ಡಿಸೆಂಬರ್ 28ರಂದು ರಾಜಸ್ಥಾನ ಸರಕಾರವು ಸಂಪುಟ ಸಭೆಯಲ್ಲಿ ಕೈಗೊಂಡಿತ್ತು. ಪ್ರತಿಭಟನಕಾರರು ರಾಜ್ಯದ ವಿವಿಧೆಡೆ ರಸ್ತೆ ತಡೆ ಹಾಗೂ ಧರಣಿಗಳನ್ನು ನಡೆಸಿದರು. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಸುಖರಾಮ್ ಬಿಷ್ಣೋಯಿ ಅವರು ಸಂಚೋರೆ ಪಟ್ಟಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ವರ್ತಕರ ಸಂಘಟನೆ ‘ ವ್ಯಾಪಾರಿ ಮಂಡಲ್’ ನೀಡಿದ ಕರೆಯ ಮೇರೆಗೆ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಚರಿಸಿದವು.
ನೀಮ್ ಕಾ ಠಾಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಶ್ ಮೋದಿ ಅವರು ಕೂಡಾ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ನಗರದ ಅಂಗಡಿ,ಮುಂಗಟ್ಟೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು ಹಾಗೂ ರೈಲುಗಳ ಸಂಚಾರಕ್ಕೂ ಅಡ್ಜಿಪಡಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರದ್ದುಗೊಳಿಸಲ್ಪಟ್ಟ ನೂತನ ಜಿಲ್ಲೆಗಳನ್ನು ಮರುಸ್ಥಾಪಿಸದೆ ಇದ್ದಲ್ಲೇ ಜನವರಿ 1ರಿಂದ ರಾಜ್ಯಾದ್ಯಂತ ತನ್ನ ಪಕ್ಷವು ಪ್ರತಿಭಟನೆಗಳನ್ನು ನಡೆಸಲಿದೆಯೆಂದು ರಾಜಸ್ಥಾನ ಕಾಂಗ್ರೆಸ್ ವರಿಷ್ಠ ಗೋವಿಂದ್ ಸಿಂಗ್ ತಿಳಿಸಿದರು.
ಡಿಸೆಂಬರ್ 28ರಂದು ಭಜನ್ಲಾಲ್ ಶರ್ಮಾ ನೇತೃತ್ವದ ರಾಜಸ್ಥಾನ ಸರಕಾರವು, ಅನೂಪ್ಗಡ, ಡುಡು, ಗಂಗಾಪುರ ನಗರ, ಜೋಧಪುರ ಗ್ರಾಮಾಂತರ, ಕೇಕ್ರಿ, ನೀಮ್ ಕಾ ಠಾಣಾ, ಸಂಚೋರೆ ಹಾಗೂ ಶಹಾಪುರ ಜಿಲ್ಲೆಗಳನ್ನು ರದ್ದುಪಡಿಸಿತ್ತು. ಆದಾಗ್ಯೂ ಬಲ್ಟೋರಾ,ಬಿಯಾವರ್, ದಿಡ್ವಾನಾ- ಕುಂಚಮಾನ್, ಕೋಟ್ಪುತ್ಲಿ-ಬೆಹೊರ್,ಖೈರ್ತಾಲ್-ಟಿಜಾರಾ, ಫಲೊಡಿ ಹಾಗೂ ಸಲುಂಬರ್ ಜಿಲ್ಲೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು.
2023ರಲ್ಲಿ, ಅಶೋಕ್ ಗೆಹ್ಲೋಟ್ ನೇತೃತ್ವದ ಆಗಿನ ಕಾಂಗ್ರೆಸ್ ಸರಕಾರವು 19 ಹೊಸ ಜಿಲ್ಲೆಗಳನ್ನು ಹಾಗೂ ಮೂರು ನೂತನ ವಿಭಾಗೀಯ ಮುಖ್ಯಕಾರ್ಯಾಲಯಗಳ ರಚನೆಯನ್ನು ಘೋಷಿತ್ತು.