ರಾಜಸ್ಥಾನ: ಬಿಜೆಪಿಗೆ ಸೋಲಿನ ರುಚಿ ತೋರಿಸಿದ ಕಾಂಗ್ರೆಸ್ ಪಕ್ಷದ ದಲಿತ ಅಭ್ಯರ್ಥಿ 26 ವರ್ಷದ ಸಂಜನಾ ಜಾಟವ್
ಸಂಜನಾ ಜಾಟವ್ | PC : ANI
ಜೈಪುರ: ಆರು ತಿಂಗಳ ಹಿಂದೆಯಷ್ಟೆ ರಾಜಸ್ಥಾನದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅತ್ಯಂತ ಕಿರಿಯ ವಯಸ್ಸಿನ ದಲಿತ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಸಂಜನಾ ಜಾಟವ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಫೀನಿಕ್ಸ್ನಂತೆ ಮೇಲೆದ್ದು ಬಂದಿದ್ದಾರೆ. 26 ವರ್ಷದ ಸಂಜನಾ ಜಾಟವ್ ಸಂಸದೆಯಾಗಿ ಆಯ್ಕೆಯಾಗಿರುವ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.
ಅಲ್ವಾರ್ನ ಕಠುಮಾರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಜನಾ ಜಾಟವ್ ಅವರ ವಯಸ್ಸು ಆಗ ಕೇವಲ 25 ವರ್ಷವಾಗಿತ್ತು. ಆದರೆ, ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗ, ಅವರು ಕೇವಲ 409 ಮತಗಳ ಅಂತರದಲ್ಲಿ ಬಿಜೆಪಿಯ ರಮೇಶ್ ಖಿಂಚಿ ಎದುರು ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಸಂಜನಾ ಹಾಗೂ ಅವರ ಪ್ರತಿಸ್ಪರ್ಧಿಯಾಗಿದ್ದ ರಮೇಶ್ ಇಬ್ಬರೂ 79,000ಕ್ಕಿಂತಲೂ ಹೆಚ್ಚು ಮತಗಳನ್ನು ಗಳಿಸಿದ್ದರು.
ಈ ಕುರಿತು ಆಗ ಪ್ರತಿಕ್ರಿಯಿಸಿದ್ದ ಸಂಜನಾ, "ನನಗೆ ಯಾವುದೇ ಅನುಭವವಿರಲಿಲ್ಲ. ಆದರೂ ನನಗೆ ಜನರು ಅಪಾರ ಪ್ರೀತಿ ತೋರಿದರು" ಎಂದು ಹೇಳಿದ್ದರು.
ಆದರೆ ಭರತ್ಪುರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಜನಾ, 5.79 ಲಕ್ಷಕ್ಕಿಂತಲೂ ಅಧಿಕ ಮತ ಪಡೆದು, 51,983 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿನ ಪರಾಭವವು ಸಂಜನಾರ ಪ್ರಚಾರದ ದೃಷ್ಟಿಕೋನವನ್ನು ಮತ್ತಷ್ಟು ಮೊನಚಾಗಿಸಿತು. ಲೋಕಸಭಾ ಚುನಾವಣೆ ಸಮೀಪಿಸಿದಾಗ, ತನ್ನ ಪ್ರಚಾರ ಕಾರ್ಯತಂತ್ರವನ್ನು ಬದಲಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಂಡ ಸಂಜನಾ, ಕಾರ್ಯತಂತ್ರ, ಪ್ರಚಾರ ನಿರ್ವಹಣೆ ಹಾಗೂ ಕಾರ್ಯಕರ್ತರ ಪಡೆಯನ್ನು ಬಲಿಷ್ಠಗೊಳಿಸುವತ್ತ ಹೆಚ್ಚು ಆದ್ಯತೆ ನೀಡಿದರು. ಅದರ ಫಲಿತಾಂಶವೇ ಕೇವಲ ಆರು ತಿಂಗಳ ಅವಧಿಯ ಅಂತರದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಅವರು, ಇದೀಗ ಸಂಸದೆಯ ಹಂತಕ್ಕೆ ಬೆಳೆದು ನಿಂತಿದ್ದಾರೆ.
ಕೃಪೆ: indianexpress.com