ರಾಜಸ್ಥಾನ ವಿಧಾನಸಭಾ ಚುನಾವಣೆ: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ; ಭುಗಿಲೆದ್ದ ಅಸಮಾಧಾನ
ಜೈಪುರ: ನವೆಂಬರ್ 23ರ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ 41 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಬಿಡುಗಡೆ ಮಾಡುತ್ತಿದ್ದಂತೆಯೇ, ಟಿಕೆಟ್ ವಂಚಿತರಿಂದ ಅಸಮಾಧಾನದ ಹೊಗೆ ಭುಗಿಲೆದ್ದಿದೆ.
ಬಿಜೆಪಿ ಸೋಮವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 31 ಹೊಸಮುಖಗಳಿವೆ. ಜತೆಗೆ ಏಳು ಮಂದಿ ಸಂಸದರನ್ನು ಕೂಡಾ ಪಕ್ಷ ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ಅವರಿಗೆ ಆಪ್ತರು ಎನಿಸಿಕೊಂಡ ಹಲವು ಮಂದಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಇವರು ಪಕ್ಷದ ನಿರ್ಧಾರದಿಂದ ಕೋಪಗೊಂಡಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಪರಿಸ್ಥಿತಿಯ ಅವಲೋಕನಕ್ಕಾಗಿ ಪಕ್ಷದ ಚುನಾವಣಾ ಉಸ್ತುವಾರಿ ಹೊಣೆ ಹೊಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೈಪುರಕ್ಕೆ ಧಾವಿಸಿದ್ದಾರೆ. "ನಾವು ಮುಖಂಡರ ಜತೆ ಮಾತನಾಡಿ ಅವರ ಮನವೊಲಿಸುತ್ತೇವೆ. ಇದು ಪಕ್ಷದ ಆಂತರಿಕ ವಿಚಾರ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮಹಿಳೆಯರ ವಿರುದ್ಧದ ದೌರ್ಜನ್ಯ ಹೆಚ್ಚಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ರಾಜಸ್ಥಾನ ಜನತೆ ನಿರ್ಧರಿಸಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಝೋತ್ವಾರಾ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ರಾಜಪಾಲ್ ಶೇಖಾವತ್ ಅವರ ಬೆಂಬಲಿಗರು ಸೋಮವಾರ ರಾತ್ರಿ ಸಭೆ ಸೇರಿ, ಅವರ ಪರ ಘೋಷಣೆ ಕೂಗಿದ್ದಲ್ಲದೇ ಜೈಪುರದಲ್ಲಿ ಬಿಜೆಪಿ ಕಚೇರಿಗೆ ಪಾದಯಾತ್ರೆಯನ್ನೂ ನಡೆಸಿದರು. ನನಗೆ ಟಿಕೆಟ್ ನಿರಾಕರಿಸಿರುವುದು ನಿಜಕ್ಕೂ ಆಘಾತಕಾರಿ ಎಂದು ಶೇಖಾವತ್ ಬಣ್ಣಿಸಿದ್ದಾರೆ. 15 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಬೆಳೆಸಿ, ಎರಡು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೂ, ಈ ಬಾರಿ ಜೈಪುರ ಗ್ರಾಮೀಣ ಸಂಸದ ರಾಜ್ಯವರ್ಧನ್ ರಾಥೋಡ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ.
ನಾಗರ್ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ಅನಿತಾ ಸಿಂಗ್ ಕೂಡಾ ಬಹಿರಂಗವಾಗಿ ಪಕ್ಷದ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ನನ್ನನ್ನು ಕಡೆಗಣಿಸಿ, 2018ರ ಚುನಾವಣೆಯಲ್ಲಿ ಭಾರಿ ಅಂತರದಿಂದ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂಧು ಅವರು ಹೇಳಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಜವಾಹರ್ ಸಿಂಗ್ ಬೆದ್ಹಾಮ್ ಅವರಿಗೆ ಟಿಕೆಟ್ ನೀಡಲಾಗಿದೆ. ಅತೃಪ್ತಿ ಹೊಂದಿರುವ ಎಲ್ಲ ಮುಖಂಡರು ಮಾಜಿ ಸಿಎಂ ವಸುಂಧರರಾಜೇ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.