ರಾಜಸ್ಥಾನ ವಿಧಾನಸಭಾ ಚುನಾವಣೆ: ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಗೆಹ್ಲೋಟ್ ಸರ್ದಾರ್ಪುರದಿಂದ, ವಸುಂಧರಾ ರಾಜೇ ಝಲ್ರಾಪಟನ್ನಿಂದ ಸ್ಪರ್ಧೆ
File Photo
ಹೊಸದಿಲ್ಲಿ,ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಶನಿವಾರ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರನ್ನು ಅವರ ಸಾಂಪ್ರದಾಯಿಕ ಝಲ್ರಾಪಟನ್ನಿಂದ ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ನಿಂದ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸರ್ದಾರ್ಪುರದಿಂದ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಟೊಂಕ್ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
200 ಸದಸ್ಯಬಲದ ರಾಜಸ್ಥಾನ ವಿಧಾನಸಭಾ ಚುನಾವಣೆಯು ನ.25ರಂದು ನಡೆಯಲಿದೆ.
ಕಾಂಗ್ರೆಸ್ 33 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು,ಸ್ಪೀಕರ್ ಸಿ.ಪಿ.ಜೋಶಿ,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಟ್ಸಾರಾ, ಸಚಿವ ಹರೀಶ ಚೌಧರಿ ಮತ್ತು ಮಮತಾ ಭೂಪೇಶ್ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯು ಇನ್ನಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರವಿವಾರ ಸಭೆ ಸೇರಲಿದೆ.
ಬಿಜೆಪಿಯು ತನ್ನ ಐದು ಬಾರಿಯ ಶಾಸಕ ಹಾಗೂ ಪಕ್ಷದ ಹಿರಿಯ ನಾಯಕ ಭೈರೋನ್ ಸಿಂಗ್ ಶೇಖಾವತ್ ಅವರ ಅಳಿಯ ನರ್ಪತ್ ಸಿಂಗ್ ರಜ್ವಿ ಅವರನ್ನು ವಿದ್ಯಾನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಣಕ್ಕಿಳಿಸಿದೆ. ಇತ್ತೀಚಿಗೆ ಪಕ್ಷಕ್ಕೆ ಸೇರ್ಪಡೆಗೊಂಡ ಮಹಾರಾಣಾ ಪ್ರತಾಪ ಸಿಂಗ್ ಅವರ ವಂಶಜ ವಿಶ್ವರಾಜ ಸಿಂಗ್ ಮೇವಾಡ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ ಪೂನಿಯಾ, ವಿಧಾನಸಭೆಯಲ್ಲಿ ಬಿಜೆಪಿ ನಾಯಕ ರಾಜೇಂದ್ರ ರಾಠೋಡ್ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎರಡನೇ ಪಟ್ಟಿಯ ಬಿಡುಗಡೆಯೊಂದಿಗೆ ಬಿಜೆಪಿಯು ಈವರೆಗೆ ತನ್ನ 124 ಅಭ್ಯರ್ಥಿಗಳನ್ನು ಘೋಷಿಸಿದೆ.