ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ನಡೆದ ಜ.22ನ್ನು ಶಾಲೆಗಳಲ್ಲಿ ವಾರ್ಷಿಕ ಉತ್ಸವ ದಿನಾಂಕವನ್ನಾಗಿ ಪ್ರಕಟಿಸಿದ ರಾಜಸ್ಥಾನ
ರಾಮ ಮಂದಿರ | PC : PTI
ಜೈಪುರ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದ ಜ.22ನ್ನು ಶಾಲೆಗಳಲ್ಲಿ ವಾರ್ಷಿಕ ಉತ್ಸವ ದಿನವನ್ನಾಗಿ ಆಚರಿಸಲಾಗುವುದು ಎಂದು ರಾಜಸ್ಥಾನ ಸರಕಾರವು ಪ್ರಕಟಿಸಿದೆ.
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನವು ಐತಿಹಾಸಿಕ ದಿನವಾಗಿದೆ. ಹೀಗಾಗಿ ಅದನ್ನು ಶಾಲಾ ಕ್ಯಾಲೆಂಡರ್ನಲ್ಲಿ ಸೇರಿಸಲಾಗಿದೆ ಎಂದು ರಾಜಸ್ಥಾನದ ಶಾಲಾ ಶಿಕ್ಷಣ ಸಚಿವ ಮದನ ದಿಲಾವರ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಶಾಲೆಗಳಲ್ಲಿ ಈ ದಿನವನ್ನು ಹೇಗೆ ಆಚರಿಸಬಹುದು ಎಂಬ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ. ಜ.22ರಂದು ಶಾಲೆಗಳಿಗೆ ರಜೆಯಿರುವುದಿಲ್ಲ ಮತ್ತು 1ರಿಂದ 12ನೇ ತರಗತಿಯವರೆಗೆ ಎಲ್ಲ ತರಗತಿಗಳ ವಿದ್ಯಾರ್ಥಿಗಳು ಈ ದಿನವನ್ನು ಆಚರಿಸಲಿದ್ದಾರೆ ಎಂದೂ ದಿಲಾವರ್ ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ಪೋಷಕರಿಗಾಗಿ ಹೊರಡಿಸುವ ಕ್ಯಾಲೆಂಡರ್ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಗುವ ವಿವಿಧ ವಿಷಯಗಳನ್ನು ಪಟ್ಟಿ ಮಾಡುವ ಜೊತೆಗೆ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಆಚರಿಸಲಾಗುವ ಹಬ್ಬಗಳನ್ನು ಉಲ್ಲೇಖಿಸುತ್ತದೆ.
ಅಯೋಧ್ಯೆಯ ರಾಮ ಮಂದಿರ ಇನ್ನೂ ಪೂರ್ಣಗೊಂಡಿರದಿದ್ದರೂ ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಿದ್ದ ಸಮಾರಂಭದಲ್ಲಿ ಅದರ ಉದ್ಘಾಟನೆ ನೆರವೇರಿತ್ತು.
2025,ಜ.22ರಂದು ಉತ್ಸವವನ್ನು ಹೇಗೆ ಆಚರಿಸಲಾಗುತ್ತದೆ ಎನ್ನುವುದನ್ನು ರಾಜಸ್ಥಾನ ಸರಕಾರವು ವಿವರಿಸಿಲ್ಲ. ಆದರೆ ಹಬ್ಬಗಳು ಮತ್ತು ಮಹತ್ವದ ದಿನಗಳನ್ನು ಹೇಗೆ ಆಚರಿಸಬೇಕು ಎಂಬ ಬಗ್ಗೆ ಶಾಲಾ ಕ್ಯಾಲೆಂಡರ್ ಸಾಮಾನ್ಯ ನಿರ್ದೇಶನಗಳನ್ನು ಒದಗಿಸುತ್ತದೆ.
ಸರಕಾರದ ಕ್ರಮವು ನಾಗರಿಕ ಹಕ್ಕುಗಳ ಗುಂಪುಗಳಿಂದ ಟೀಕೆಗೆ ಗುರಿಯಾಗಿದೆ. ಇದು ದೇಶದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಅವು ಹೇಳಿವೆ.
ಸರಕಾರವು ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್),ಶಾಲೆಗಳಲ್ಲಿ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ಆಚರಿಸುವುದು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗುತ್ತದೆ ಮತ್ತು ಇತರ ಸಮುದಾಯಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಬಹುದಾದ ನಿರ್ದಿಷ್ಟ ನಿರೂಪಣೆಯ ಪ್ರಯತ್ನವಾಗಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದೆ.
ರಾಜ್ಯ ಸರಕಾರವು ಹಿಂದೆ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿದ್ದು,ಇದು ಮುಸ್ಲಿಮ್ ಗುಂಪುಗಳಿಂದ ಟೀಕೆಗೆ ಗುರಿಯಾಗಿತ್ತು.
ಇದನ್ನು (ರಾಮ ಮಂದಿರ ಉತ್ಸವ) ಕೇವಲ ರಾಜಕೀಯ ಲಾಭಗಳಿಕೆಗಾಗಿ ಶಾಲೆಗಳಲ್ಲಿ ಅನುಷ್ಠಾನಿಸಲಾಗುತ್ತಿದೆ. ಈ ಇಡೀ ನಡೆಯಲ್ಲಿ ಧಾರ್ಮಿಕವಾಗಿರುವುದು ಏನೂ ಇಲ್ಲ ಎಂದು ಹೇಳಿರುವ ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ ಅವರು, ವಾಸ್ತವದಲ್ಲಿ ಅನೇಕ ಪಂಡಿತರು ಜ.22 ಪ್ರಾಣ ಪ್ರತಿಷ್ಠಾಪನೆಗೆ ಮಂಗಳಕರ ದಿನವಾಗಿಲ್ಲ ಎಂದು ಹೇಳಿದ್ದರು ಮತ್ತು ಅದನ್ನು ದೇಶಾದ್ಯಂತ ಶಾಲೆಗಳಲ್ಲಿ ಆಚರಿಸುವುದು ಮುಂದಿನ ಪೀಳಿಗೆಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದಿದ್ದಾರೆ.
ಮಂದಿರದ ಪ್ರಾಣ ಪ್ರತಿಷ್ಠೆಯನ್ನು ಬಹುತ್ವದ ಮತ್ತು ವೈವಿಧ್ಯಮಯ ಭಾರತೀಯ ಗಣರಾಜ್ಯದ ಜಾತ್ಯತೀತ ಇತಿಹಾಸವನ್ನು ಅಳಿಸುವ ಕ್ರಿಯೆಯಾಗಿ ನೋಡಬೇಕು ಎಂದೂ ಅವರು ಹೇಳಿದ್ದಾರೆ.