ರಾಜಸ್ಥಾನ | ಆರು ದಿನಗಳಿಂದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಬಾಲಕಿ: ನೆರವಿಗಾಗಿ ತಾಯಿಯ ಮೊರೆ
PC : NDTV
ಜೈಪುರ: ಕಳೆದ ಸೋಮವಾರ ಮಧ್ಯಾಹ್ನ ರಾಜಸ್ಥಾನದ ಕೊತ್ಪುತ್ಲಿಯಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮೂರು ವರ್ಷದ ಬಾಲಕಿ ಚೇತನಾಳ ಹತಾಶ ತಾಯಿ, ತಮ್ಮ ಪುತ್ರಿಯನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತರುವಂತೆ ಜಿಲ್ಲಾಡಳಿತಕ್ಕೆ ಮೊರೆ ಇಡುತ್ತಿದ್ದಾರೆ.
ಚೇತನಾಳ ತಾಯಿ ಧೋಲೆ ದೇವಿ ಕಣ್ಣೀರಿಡುತ್ತಾ, ತನ್ನ ಪುತ್ರಿಯನ್ನು ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ಮೊರೆ ಇಡುತ್ತಿದ್ದ ದೃಶ್ಯ ಶನಿವಾರ ಕಂಡು ಬಂದಿತು. “ದೇವರ ಮೇಲಾಣೆ, ನೀವು ನನ್ನ ಪುತ್ರಿಯನ್ನು ಹೊರ ತನ್ನಿ” ಎಂದು ಆಕೆ ಹತಾಶೆಯಿಂದ ಮನವಿ ಮಾಡುತ್ತಿದ್ದರು. ಈ ಅಗ್ನಿ ಪರೀಕ್ಷೆಯು ಆಕೆಯನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿದ್ದು, ರಕ್ಷಣಾ ಕಾರ್ಯಾಚರಣೆ ಒಂದು ಕ್ಷಣವೂ ಬಿಡುವಿಲ್ಲದೆ ಮುಂದುವರಿದಿದೆ.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಚೇತನಾಳ ಚಿಕ್ಕಪ್ಪ ಶುಭ್ ರಾಮ್, ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. “ನೀವೇನಾದರೂ ತುಂಬಾ ಪ್ರಶ್ನೆ ಕೇಳಿದರೆ, “ಜಿಲ್ಲಾಧಿಕಾರಿಗಳು ನಿಮಗೆ ಮಾಹಿತಿ ನೀಡುತ್ತಾರೆ. ಅವರೀಗ ವಿಶ್ರಮಿಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ” ಎಂದು ಅವರು ದೂರಿದ್ದಾರೆ.
ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು ನಮ್ಮ ಕುಟುಂಬವನ್ನು ಭೇಟಿ ಮಾಡಿಲ್ಲ ಎಂದೂ ಅವರು ಆಪಾದಿಸಿದ್ದಾರೆ.
ಚೇತನಾಳ ತಾಯಿ ತೀವ್ರ ದುಃಖಿತರಾಗಿದ್ದು, ಒಂದೇ ಸಮನೆ ಅಳುತ್ತಿದ್ದಾರೆ. ತಮ್ಮ ಪುತ್ರಿಯನ್ನು ಹೊರ ತನ್ನಿ ಎಂದು ಹತಾಶವಾಗಿ ಮನವಿ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಬಾಲಕಿಯು 150 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಆಕೆಯ ಕುಟುಂಬದ ಸದಸ್ಯರು ಹಾಗೂ ಇಡೀ ಗ್ರಾಮದ ಸದಸ್ಯರು ಆಕೆಯ ರಕ್ಷಣೆಯನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಸೋಮವಾರ(ಡಿಸೆಂಬರ್ 23)ದಂದು ಕೊತ್ಪುತ್ಲಿಯಲ್ಲಿ 700 ಅಡಿ ಆಳದ ಬಾವಿಗೆ ಬಿದ್ದಿರುವ ಮೂರು ವರ್ಷದ ಬಾಲಕಿ ಚೇತನಾಳವನ್ನು ಹೊರ ತರುವ ದಣಿವರಿಯದ ರಕ್ಷಣಾ ಕಾರ್ಯಾಚರಣೆ ಶನಿವಾರ ಆರನೆ ದಿನಕ್ಕೆ ಪ್ರವೇಶಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸಿರುವ ರಕ್ಷಣಾ ತಂಡಗಳು, ಶನಿವಾರ ಬೆಳಗ್ಗೆ ಕೇಸಿಂಗ್ ಪೈಪ್ ಗಳಿಗೆ ವೆಲ್ಡಿಂಗ್ ಹಾಕುವುದನ್ನು ಪೂರ್ಣಗೊಳಿಸಿವೆ. ಮುಂದಿನ ಹಂತವು 90 ಡಿಗ್ರಿ ಕೋನದಲ್ಲಿ ಅಡ್ಡಲಾಗಿ 8 ಅಡಿಯ ಸುರಂಗ ತೋಡುವುದನ್ನು ಒಳಗೊಂಡಿದೆ. ಇದರಿಂದ ಚೇತನಾಳನ್ನು ಸುರಕ್ಷಿತವಾಗಿ ಹೊರ ತರಬಹುದು ಎಂಬ ಆಶಾವಾದವನ್ನು ಅಧಿಕಾರಿಗಳು ಹೊಂದಿದ್ದಾರೆ.
ಕೇಸಿಂಗ್ ಪೈಪ್ ನ ವೆಲ್ಡಿಂಗ್ ಕಾರ್ಯ ಮುಕ್ತಾಯಗೊಂಡಿದ್ದು, ಇದೀಗ ಅದಕ್ಕೆ ಅಡ್ಡಲಾಗಿ ಸುರಂಗ ಕೊರೆಯುವುದರತ್ತ ರಕ್ಷಣಾ ಪಡೆಗಳು ಗಮನ ಹರಿಸಿವೆ. ಕಾರ್ಯಾಚರಣೆಗೆ ನೆರವು ಒದಗಿಸಲು ಫ್ಯಾನ್ ಗಳು, ದೀಪಗಳು, ಆಮ್ಲಜನಕ ಹಾಗೂ ಕತ್ತರಿಸುವ ಯಂತ್ರಗಳನ್ನು ಕೊಳವೆ ಬಾವಿಯೊಳಗೆ ಕಳಿಸಲಾಗಿದೆ. ಸುರಕ್ಷತೆಯ ಕಾರಣದಿಂದಾಗಿ, ಘಟನಾ ಸ್ಥಳವನ್ನು ಪ್ರವೇಶಿಸಲು ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಗಿದೆ.
ಪರ್ಯಾಯ ರಕ್ಷಣಾ ಕಾರ್ಯಾಚರಣೆಯನ್ನು ಜಾರಿಗೊಳಿಸದ ಕುರಿತು ಜನರು ಟೀಕಿಸತೊಡಗಿದ್ದಾರೆ. ಎ ಯೋಜನೆಯ ಜೊತೆ ಜೊತೆಗೇ ಬಿ ಯೋಜನೆಯನ್ನೂ ಜಾರಿಗೊಳಿಸಿದ್ದರೆ, ರಕ್ಷಣಾ ಕಾರ್ಯಾಚರಣೆ ಪ್ರಕ್ರಿಯೆ ತ್ವರಿತವಾಗುತ್ತಿತ್ತು ಹಾಗೂ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಅವಧಿಯನ್ನು ತಪ್ಪಿಸುತ್ತಿತ್ತು ಎಂಬುದು ಅವರ ವಾದವಾಗಿದೆ.
ಹಲವು ಸವಾಲುಗಳ ಹೊರತಾಗಿಯೂ, ಚೇತನಾಳನ್ನು ಸುರಕ್ಷಿತವಾಗಿ ಹೊರತರಲು ಕಟಿಬದ್ಧವಾಗಿರುವ ರಕ್ಷಣಾ ತಂಡಗಳು, ಸಕಾರಾತ್ಮಕ ಫಲಿತಾಂಶ ದೊರೆಯಬಹುದು ಎಂಬ ಆಶಾವಾದದಲ್ಲಿವೆ.
ಸೌಜನ್ಯ: ndtv.com