ಸರ್ಕಾರದ ಧನಾತ್ಮಕ ಅಂಶ ಬಿಂಬಿಸುವ ಯೂಟ್ಯೂಬ್ ಚಾನಲ್ ನಿರ್ವಹಿಸಲು ರಾಜಸ್ಥಾನ ಸರ್ಕಾರ ಟೆಂಡರ್!
ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ PC: Facebook/Bhajanlal Sharma
ಜೈಪುರ: ರಾಜ್ಯ ಸರ್ಕಾರದ ಧನಾತ್ಮಕ ಅಂಶಗಳನ್ನು ಬಿಂಬಿಸುವ 24/7 ಯೂಟ್ಯೂಬ್ ಚಾನಲ್ ನಿರ್ವಹಿಸಲು ರಾಜಸ್ಥಾನ ಸರ್ಕಾರ ಟೆಂಡರ್ ಆಹ್ವಾನಿಸಿದೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ದ ಇಂಡಿಯನ್ ಎಕ್ಸ್ ಪ್ರೆಸ್ ಶುಕ್ರವಾರ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಈ 10 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿದ್ದು, ನವೆಂಬರ್ 28ರವರೆಗೆ ಟೆಂಡರ್ ಮುಕ್ತವಾಗಿರುತ್ತದೆ. ಟೆಂಡರ್ ನಲ್ಲಿ ಯಶಸ್ವಿಯಾದ ಏಜೆನ್ಸಿಗೆ ಯೂಟ್ಯೂಬ್ ಚಾನಲ್ ನಡೆಸುವ ಹಾಗೂ ಸುದ್ದಿಗಳ ಸಂಗ್ರಹ, ಸಂಸ್ಕರಣೆ, ಸುದ್ದಿ ಬುಲೆಟಿನ್ ಗಳನ್ನು ತಯಾರಿಸುವ ಮತ್ತು ಸುದ್ದಿ ಪ್ರಸರಣದ ಜವಾಬ್ದಾರಿಯನ್ನು ನೀಡಲಾಗುತ್ತದೆ.
ಟೆಂಡರ್ ವಿಜೇತ ಸಂಸ್ಥೆಗಳು ಜಿಲ್ಲಾಮಟ್ಟದ ಯೂಟ್ಯೂಬ್ ಚಾನಲ್ ಗಳಿಗೆ ಮತ್ತು ರಾಜಸ್ಥಾನ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗಗಳ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಿಗೆ ಮಾಹಿತಿ ಸಿದ್ಧಪಡಿಸಿಕೊಡುವ ಜವಾಬ್ದಾರಿಯೂ ಇರುತ್ತದೆ.
ಏಜೆನ್ಸಿ ದೃಶ್ಯ ಮತ್ತು ಶ್ರವ್ಯ ಸಂಪಾದಕರು, ಸುದ್ದಿ ನಿರೂಪಕರು ಮತ್ತು ನಿರ್ಮಾಣಗಾರರು, ಕ್ಯಾಮೆರಾಮನ್ ಗಳನ್ನು ಹೊಂದಿರಬೇಕಾಗುತ್ತದೆ ಹಾಗೂ ರಾಜ್ಯದ ಎಲ್ಲ 200 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಡಿ ಸುದ್ದಿಗಾರರನ್ನು ಹೊಂದಿರಬೇಕಾಗುತ್ತದೆ.
ಸೂಚನೆ ಬಂದ ಮೂರು ಗಂಟೆಗಳ ಒಳಗಾಗಿ ಬಿಡಿ ಸುದ್ದಿಗಾರರು ವಿಡಿಯೊಗಳನ್ನು ಒದಗಿಸಬೇಕಾಗುತ್ತದೆ. ಈ ಗಡುವು ಮೀರಿದರೆ ಅವರಿಗೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ ಹಾಗೂ ಒಂದು ವೇಳೆ ವಿಡಿಯೊವನ್ನು ಒದಗಿಸದಿದ್ದಲ್ಲಿ 50 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ ಎಂದು ಎಕ್ಸ್ ಪ್ರೆಸ್ ವರದಿ ವಿವರಿಸಿದೆ.