ರಾಜಸ್ಥಾನ: ನೀಟ್ ಆಕಾಂಕ್ಷಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಕೋಟಾ: ನೀಟ್ ಆಕಾಂಕ್ಷಿಯೋರ್ವ ನಗರದ ಕುನ್ಹರಿ ಪ್ರದೇಶದಲ್ಲಿರುವ ಹಾಸ್ಟೆಲ್ನ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಕೋಟಾದಲ್ಲಿ ಈ ವರ್ಷ ನೀಟ್ ಅಥವಾ ಜೆಇಇ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ 7ನೇ ಪ್ರಕರಣ ಇದಾಗಿದೆ.
ಮೃತಪಟ್ಟ ನೀಟ್ ಆಕಾಕ್ಷಿಯನ್ನು ಸುಮಿತ್ ಪಂಚಾಲ್ (20) ಎಂದು ಗುರುತಿಸಲಾಗಿದೆ. ಹರ್ಯಾಣದ ರೋಹ್ಟಕ್ನ ನಿವಾಸಿಯಾಗಿದ್ದ ಈತ ಕಳೆದ ಒಂದು ವರ್ಷಗಳಿಂದ ಇಲ್ಲಿನ ತರಬೇತಿ ಕೇಂದ್ರವೊಂದರಲ್ಲಿ ನೀಟ್ಗೆ ಸಿದ್ಧತೆ ನಡೆಸುತ್ತಿದ್ದ. ಹಾಸ್ಟೆಲ್ ಸಿಬ್ಬಂದಿ ಮೃತದೇಹವನ್ನು ಗುರುತಿಸುವ 9 ಗಂಟೆಗೆ ಮುನ್ನ ಈತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸುಮಿತ್ ಪಂಚಾಲ್ನ ಹೆತ್ತವರು ಸಂದೇಹ ವ್ಯಕ್ತಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸುವಂತೆ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಪೋಷಕರ ಆಗ್ರಹದ ಮೇರೆಗೆ ವೈದ್ಯಕೀಯ ಮಂಡಳಿ ವಿದ್ಯಾರ್ಥಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಕಪ್ಟಾನ್ ತಿಳಿಸಿದ್ದಾರೆ.