ರಾಜಸ್ಥಾನ | ಮತಗಟ್ಟೆಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ಪಕ್ಷೇತರ ಅಭ್ಯರ್ಥಿಯಿಂದ ಕಪಾಳಮೋಕ್ಷ
Screengrab x/@PRMundru
ಜೈಪುರ: ರಾಜಸ್ಥಾನದ ಡಿಯೋಲಿ-ಉನಿಯಾರಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್ಡಿಎಂ)ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಂರವತ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರು ಮತಗಟ್ಟೆಗೆ ನಡೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಚುನಾವಣಾ ಮೇಲ್ವಿಚಾರಣೆ ಕರ್ತವ್ಯದಲ್ಲಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದು, ಈ ವೇಳೆ ಅಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ದಿಯೋಲಿ-ಉನಿಯಾರಾ ಕ್ಷೇತ್ರದ ಉಪಚುನಾವಣೆಗೆ ಕಾಸ್ಟೋರ್ ಚಂದ್ ಮೀನಾ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದ ಬೆನ್ನಲ್ಲೇ ನರೇಶ್ ಮೀನಾ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದರು. ಭಾರತ್ ಆದಿವಾಸಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಮೀನಾ ಉಪಚುನಾವಣೆಯಲ್ಲಿ ಮತ ವಿಭಜನೆಯ ಬಗ್ಗೆ ಕಳವಳವನ್ನು ಉಂಟು ಮಾಡಿತ್ತು.
ಸಾಮ್ರಾವತಾ ಗ್ರಾಮದ ನಿವಾಸಿಗಳು ಉಪಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು. ಗ್ರಾಮಸ್ಥರಿಗೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಏರಿಯಾ ಮ್ಯಾಜಿಸ್ಟ್ರೇಟ್ ಚೌಧರಿ ಅವರು ಮತ ಚಲಾಯಿಸುವಂತೆ ಜನರನ್ನು ಮನವೊಲಿಸಲು ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಪಕ್ಷೇತರ ಅಭ್ಯರ್ಥಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸೌಮ್ಯ ಝಾ ಅವರು ತಿಳಿಸಿದ್ದಾರೆ.