ರಾಜಸ್ಥಾನ | ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ; ವಿದ್ಯಾರ್ಥಿಯ ಕಿಡ್ನಿ ವೈಫಲ್ಯ
ಸಾಂದರ್ಭಿಕ ಚಿತ್ರ
ಜೈಪುರ : ಕಳೆದ ತಿಂಗಳು ಕೆಲವು ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ಗೆ ಒಳಗಾದ ಪರಿಣಾಮ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು, ನಾಲ್ಕು ಬಾರಿ ಡಯಾಲಿಸಿಸ್ ಗೆ ಒಳಗಾದ ಘಟನೆ ಡುಂಗಾರ್ಪುರ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ.
ಡುಂಗಾರ್ಪುರ ವೈದ್ಯಕೀಯ ಕಾಲೇಜಿನಲ್ಲಿ ಮೇ 15ರಂದು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಪ್ರಥಮ್ ವ್ಯಾಸ್ ಹಾಗೂ ಇತರ ಹಲವರನ್ನು ಉರಿಯುತ್ತಿರುವ ಬಿಸಿಲಿನಲ್ಲಿ 300 ಸಿಟ್ಅಪ್ ತೆಗೆಯುವಂತೆ 7 ಮಂದಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ. ಇದರಿಂದ ಪ್ರಥಮ್ ವ್ಯಾಸ್ ನ ಕಿಡ್ನಿ ಹಾಗೂ ಪಿತ್ತಕೋಶದಲ್ಲಿ ತೀವ್ರ ಗಂಭೀರ ಸೋಂಕು ಉಂಟಾಗಿದೆ ಎಂದು ಡುಂಗಾರ್ಪುರ ಸದಾರ್ ಪೊಲೀಸ್ ಠಾಣೆಯ ಎಸ್ಎಚ್ಒ ಗಿರಿಧರಿ ಸಿಂಗ್ ತಿಳಿಸಿದ್ದಾರೆ.
ಪ್ರಥಮ್ ನನ್ನು ಅಹ್ಮದಾಬಾದ್ನಲ್ಲಿರುವ ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ದಾಖಲು ಮಾಡಿ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗಿದೆ. ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಲೇಜಿನ ರ್ಯಾಗಿಂಗ್ ನಿಗ್ರಹ ಸಮಿತಿ ನಡೆಸಿದ ತನಿಖೆಯಲ್ಲಿ 7 ಮಂದಿ ವಿದ್ಯಾರ್ಥಿಗಳು ತಪ್ಪೆಸಗಿದ್ದಾರೆ ಎಂದು ಕಂಡು ಬಂದ ಬಳಿಕ ಪ್ರಾಂಶುಪಾಲರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಥಮ್ ಜೂನ್ ತಿಂಗಳಲ್ಲಿ ಕಾಲೇಜಿಗೆ ಮರು ಸೇರ್ಪಡೆಯಾಗಿದ್ದಾನೆ. ಈತ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಕಾಲೇಜು ಸೇರಿದ್ದ.
ಹಿಂದೆ ಕೂಡ ಪ್ರಥಮ್ ರ್ಯಾಗಿಂಗ್ ಎದುರಿಸಿದ್ದ. ಆದರೆ, ದೂರು ನೀಡಿರಲಿಲ್ಲ. ಆನ್ಲೈನ್ನಲ್ಲಿ ಜೂನ್ 20ರಂದು ಕಾಲೇಜಿನ ಆಡಳಿತ ಮಂಡಳಿ ದೂರು ಸ್ವೀಕರಿಸಿದ ಬಳಿಕ ಈ ಹೊಸ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏಳು ಮಂದಿ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.