ಜೈಪುರದ ಖಾಸಗಿ ಲಾಕರ್ ಗಳಲ್ಲಿ 500 ಕೋಟಿ ರೂ.ಕಪ್ಪುಹಣ 50 ಕೆ.ಜಿ. ಚಿನ್ನ: ಬಿಜೆಪಿ ಸಂಸದ ಕಿರೋಡಿಲಾಲ್ ಆರೋಪ
ಕಿರೋಡಿಲಾಲ್ ಮೀನಾ | Photo : twitter
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸುಮಾರು 100 ಖಾಸಗಿ ಲಾಕರ್ ಗಳಲ್ಲಿ 500 ಕೋಟಿ ರೂ. ಕಪ್ಪುಹಣ ಹಾಗೂ 50 ಕೆ.ಜಿ. ಚಿನ್ನವನ್ನು ಇರಿಸಲಾಗಿದೆಯೆಂದು ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿಲಾಲ್ ಮೀನಾ ಶುಕ್ರವಾರ ಆರೋಪಿಸಿದ್ದಾರೆ.
ಆದರೆ ಈ ಲಾಕರ್ ಗಳು ಯಾರಿಗೆ ಸೇರಿದ್ದೆಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
‘‘ಸುಮಾರು 100 ಲಾಕರ್ ಗಳಲ್ಲಿ 500 ಕೋಟಿ ರೂ. ಹಾಗೂ 50 ಕೆ.ಜಿ. ಚಿನ್ನ ಕೂಡಿಹಾಕಲಾಗಿದೆ. ಪೊಲೀಸರು ಬಂದು ಲಾಕರ್ ತೆರೆಯುವವರೆಗೆ ನಾನು ಗೇಟಿನ ಬಳಿ ನಿಲ್ಲುತ್ತೇನೆ’’ ಎಂದವರು ಹೇಳಿದ್ದಾರೆ.
ಆದರೆ ಈ ಲಾಕರ್ ಗಳ ಮಾಲಕರ ಹೆಸರನ್ನು ಬಹಿರಂಗಪಡಿಸಿದ್ದಲ್ಲಿ ರಾಜಕೀಯ ಒತ್ತಡಗಳಿಂದಾಗಿ ಅದನ್ನು ತೆರೆಯಲು ಸಾಧ್ಯವಾಗದು ಎಂದು ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಸವಾಯಿ ಮಾಧೋಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಮೀನಾ ಹೇಳಿದ್ದಾರೆ.
ಜೈಪುರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಲಾಕರ್ ಗಳನ್ನು ಇರಿಸಲಾಗಿದೆಯೆಂದು ಅವರು ಹೇಳಿದ ಕಟ್ಟಡವನ್ನು ಮಾಧ್ಯಮ ಸಿಬ್ಬಂದಿಗೆ ಅವರು ತೋರಿಸಿದರು ಹಾಗೂ ಜೈಪುರ ಪೊಲೀಸರು ಅವುಗಳನ್ನು ತೆರೆಯಬೇಕೆಂದು ಆಗ್ರಹಿಸಿದರು