ಏನೇ ಬಂದರೂ 370ನೇ ವಿಧಿಯನ್ನು ಮರಳಿ ಜಾರಿಗೆ ತರುವುದಿಲ್ಲ: ರಾಜ್ನಾಥ್ ಸಿಂಗ್ ಘೋಷಣೆ
ರಾಜ್ನಾಥ್ ಸಿಂಗ್ | PC : @PIB_India
ಜಮ್ಮು: ಏನೇ ಬಂದರೂ 370ನೇ ವಿಧಿಯನ್ನು ಮರುಸ್ಥಾಪಿಸುವುದಿಲ್ಲ ಎಂದು ರವಿವಾರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಘೋಷಿಸಿದ್ದಾರೆ. 370ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡುವ ಮೂಲಕ ನ್ಯಾಷನಲ್ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಜನರನ್ನು ಹಾದಿ ತಪ್ಪಿಸುತ್ತಿವೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಜಮ್ಮುವಿನ ಪೂಂಛ್ನಲ್ಲಿ ಬಿಜೆಪಿ ಅಭ್ಯರ್ಥಿ ಚೌಧರಿ ಅಬ್ದುಲ್ ಘನಿ ಪರ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "370ನೇ ವಿಧಿಯ ಬಗ್ಗೆ ಅವರು ಸಾಕಷ್ಟು ಗದ್ದಲವನ್ನುಂಟು ಮಾಡುತ್ತಿದ್ದಾರೆ. ಅದನ್ನು ಹೇಗೆ ಮರುಸ್ಥಾಪಿಸುತ್ತಾರೆ? ಕೇಂದ್ರದಲ್ಲಿರುವ ಸರಕಾರಕ್ಕೆ ಮಾತ್ರ ಆ ಅಧಿಕಾರವಿದೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾಶ್ಮೀರಕ್ಕೆ 370ನೇ ವಿಧಿಯನ್ನು ಮರುಸ್ಥಾಪಿಸಬೇಕು ಎಂಬ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಈ ವಿಷಯದ ಕುರಿತು ಇಸ್ಲಮಾಬಾದ್ ಮತ್ತು ಕಾಂಗ್ರೆಸ್-ನ್ಯಾಷನಲ್ ಕಾಂಗ್ರೆಸ್ ಮೈತ್ರಿಕೂಟವು ಒಂದೇ ನಿಲುವನ್ನು ಹೊಂದಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.