ಖರ್ಗೆಯವರಿಂದ ಅಸಂಸದೀಯ ಪದ ಬಳಕೆ ಆರೋಪ; ರಾಜ್ಯಸಭೆಯಲ್ಲಿ ಕೋಲಾಹಲ

ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಂದ ಅಸಂಸದೀಯ ಪದ ಬಳಕೆಯನ್ನು ಆರೋಪಿಸಿ ಮಂಗಳವಾರ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ತನ್ನ ಹೇಳಿಕೆಗಾಗಿ ಪೀಠದ ಕ್ಷಮೆ ಯಾಚಿಸಿದ ಖರ್ಗೆ,ಅದು ದೇಶದಲ್ಲಿ ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸರಕಾರವನ್ನು ಉದ್ದೇಶಿಸಿತ್ತು ಎಂದು ಸ್ಪಷ್ಟಪಡಿಸಿದರು.
ಪ್ರಶ್ನೆವೇಳೆಯ ಬಳಿಕ ಸದನವು ಶಿಕ್ಷಣ ಸಚಿವಾಲಯದ ಕಾರ್ಯ ನಿರ್ವಹಣೆಯ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತಿರುವಂತೆ ಹಲವಾರು ಪ್ರತಿಪಕ್ಷ ಸದಸ್ಯರು ಎದ್ದು ನಿಂತು ತಮಿಳುನಾಡು ಸರಕಾರದ ವಿರುದ್ಧ ತನ್ನ ಹೇಳಿಕೆಗಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯಡಿ ತ್ರಿಭಾಷಾ ಸೂತ್ರ ಕುರಿತು ಸೋಮವಾರ ತಮಿಳುನಾಡು ಸರಕಾರವನ್ನು ಟೀಕಿಸಿದ್ದ ಪ್ರಧಾನ್,ಅದು ರಾಜಕೀಯಕ್ಕಾಗಿ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದರು.
ಮಂಗಳವಾರ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಶಿಕ್ಷಣ ಸಚಿವಾಲಯದ ಕಾರ್ಯ ವೈಖರಿ ಕುರಿತು ಚರ್ಚೆಯನ್ನು ಆರಂಭಿಸುವಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರಿಗೆ ಸೂಚಿಸಿದಾಗ ಕೇತ್ರ ಪುನರ್ವಿಂಗಡಣೆ ಮತ್ತು ಎನ್ಇಪಿಯನ್ನು ವಿರೋಧಿಸಲು ಕಪ್ಪು ಬಟ್ಟೆ ಧರಿಸಿ ಬಂದಿದ್ದ ಡಿಎಂಕೆ ಸಂಸದರು ಎದ್ದು ನಿಂತು ಧಮೇಂದ್ರ ಅವರಿಂದ ಕ್ಷಮಾಯಾಚನೆಗೆ ಆಗ್ರಹಿಸಿದರು.
ಗದ್ದಲದ ನಡುವೆಯೇ ಖರ್ಗೆ ಮಧ್ಯಪ್ರವೇಶಿಸಲು ಎದ್ದು ನಿಂತಿದ್ದರು.
ಕಾಂಗ್ರೆಸ್ ಅಧ್ಯಕ್ಷರಿಗೆ ಈಗಾಗಲೇ ಬೆಳಿಗ್ಗೆ ಮಾತನಾಡಲು ಅವಕಾಶ ನೀಡಲಾಗಿತ್ತು ಎಂದು ಉಪ ಸಭಾಪತಿಗಳು ಹೇಳಿದಾಗ ಖರ್ಗೆ,ಆಗ ಶಿಕ್ಷಣ ಸಚಿವರು ಸದನದಲ್ಲಿ ಉಪಸ್ಥಿತರಿರಲಿಲ್ಲ,ಈಗ ಮಾತನಾಡಲು ಅವಕಾಶ ನಿರಾಕರಿಸುತ್ತಿರುವುದು ಸರ್ವಾಧಿಕಾರವಾಗಿದೆ ಎಂದು ಕಟುವಾಗಿ ಹೇಳಿದರು.
ಈಗ ಮಾತನಾಡುವುದು ದಿಗ್ವಿಜಯ ಸಿಂಗ್ ಸರದಿಯಾಗಿದೆ ಎಂದು ಉಪ ಸಭಾಪತಿ ತಿಳಿಸುತ್ತಿದ್ದಂತೆ ಖರ್ಗೆ,ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷವು ಸಿದ್ಧವಾಗಿದೆ ಎಂದು ಹೇಳಿದರು.
ಈ ವೇಳೆ,ಪ್ರತಿಪಕ್ಷವು ಸರಕಾರಕ್ಕೆ ತಿರುಗೇಟು ನೀಡಲಿದೆ ಎನ್ನುವುದನ್ನು ಸೂಚಿಸುವ ‘ಠೋಕೆಂಗೆ’ ಹಿಂದಿ ಪದವನ್ನು ಖರ್ಗೆ ಬಳಸಿದ್ದು,ಇದು ಅಸಂಸದೀಯ ಪದವಾಗಿದೆ ಎಂದು ಆರೋಪಿಸಿ ಆಡಳಿತ ಸದಸ್ಯರು ಗದ್ದಲವೆಬ್ಬಿಸಿದರು.
ಮಧ್ಯಪ್ರವೇಶಿಸಿದ ಸದನ ನಾಯಕ ಜೆ.ಪಿ.ನಡ್ಡಾ ಅವರು ವಿಪಕ್ಷ ನಾಯಕರು ಪೀಠವನ್ನು ಉದ್ದೇಶಿಸಿ ಬಳಸಿದ ಭಾಷೆಯು ಖಂಡನೀಯವಾಗಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಪೀಠಕ್ಕೆ ಬಳಸಿದ ಪದಗಳು ಮತ್ತು ಭಾಷೆ ಅಕ್ಷಮ್ಯವಾಗಿವೆ. ಆದರೂ ಅವರು ಕ್ಷಮೆಯನ್ನು ಯಾಚಿಸಬೇಕು ಮತ್ತು ಅವರು ಬಳಸಿದ್ದ ಪದವನ್ನು ಕಡತದಿಂದ ಅಳಿಸಬೇಕು ಎಂದು ಹೇಳಿದರು.
ತನ್ನ ಹೇಳಿಕೆಗಾಗಿ ತಕ್ಷಣ ಕ್ಷಮೆ ಯಾಚಿಸಿದ ಖರ್ಗೆ,ಅದು ಸರಕಾರದ ನೀತಿಗಳನ್ನು ಉದ್ದೇಶಿಸಿತ್ತೇ ಹೊರತು ಪೀಠವನ್ನಲ್ಲ ಎಂದು ಸ್ಪಷ್ಟಪಡಿಸಿದರು.
ನೀವು ಈ ದೇಶದ ಭಾಗವೊಂದರ ಮತ್ತು ಅದರ ಜನರ ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದೀರಿ,ಅವರನ್ನು ಸಂಸ್ಕೃತಿಹೀನರು ಮತ್ತು ಅನಾಗರಿಕರು ಎಂದು ಕರೆಯುತ್ತಿದ್ದೀರಿ. ರಾಜೀನಾಮೆ ನೀಡುವಂತೆ ಸಚಿವರಿಗೆ ಸೂಚಿಸಬೇಕು. ಅವರು ದೇಶವನ್ನು ವಿಭಜಿಸುವ ಮತ್ತು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ಖರ್ಗೆಯವರು ಪೀಠದ ಕ್ಷಮೆ ಯಾಚಿಸಿದ್ದು ಒಳ್ಳೆಯ ಮತ್ತು ಮೆಚ್ಚುವಂತಹ ನಡೆ ಎಂದು ಹೇಳಿದ ನಡ್ಡಾ,ಅವರ ಹೇಳಿಕೆಯು ಸರಕಾರವನ್ನು ಉದ್ದೇಶಿಸಿದ್ದರೂ ಅದು ಈಗಲೂ ಖಂಡನೀಯವಾಗಿದೆ ಎಂದರು.
ಬಳಿಕ ಉಪ ಸಭಾಪತಿಗಳ ಸೂಚನೆಯಂತೆ ದಿಗ್ವಿಜಯ ಸಿಂಗ್ ಶಿಕ್ಷಣ ಇಲಾಖೆಯ ಕಾರ್ಯ ವೈಖರಿ ಕುರಿತು ಚರ್ಚೆಯನ್ನು ಆರಂಭಿಸಿದರು.