ರಾಜ್ಯಸಭೆಯಲ್ಲಿ ಡುಪ್ಲಿಕೇಟ್ ಮತದಾರರ ಗುರುತಿನ ಚೀಟಿ ಕುರಿತು ಚರ್ಚೆಗೆ ಸಿಗದ ಅವಕಾಶ; ಪ್ರತಿಪಕ್ಷದಿಂದ ಸಭಾತ್ಯಾಗ

PC : PTI
ಹೊಸದಿಲ್ಲಿ: ಚುನಾವಣಾ ಆಯೋಗದಿಂದ ಹಲವಾರು ಡುಪ್ಲಿಕೇಟ್ ಮತದಾರರ ಗುರುತಿನ ಚೀಟಿಗಳ ವಿತರಣೆಯಲ್ಲಿ ಲೋಪಗಳು ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತು ಚರ್ಚೆಗೆ ಅವಕಾಶ ನಿರಾಕರಿಸಿದ ಬಳಿಕ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಸೋಮವಾರ ರಾಜ್ಯಸಭೆಯಿಂದ ಹೊರನಡೆದವು.
ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ನಿಯಮ 267ರಡಿ ನೋಟಿಸ್ಗಳನ್ನು ನೀಡಿದ್ದರು. ಈ ನಿಯಮವು ಅವರು ಎತ್ತಿರುವ ವಿಷಯಗಳ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಲು ದಿನದ ಕಲಾಪವನ್ನು ಬದಿಗಿರಿಸಲು ಅವಕಾಶ ನೀಡುತ್ತದೆ. ಆದರೆ ಅವು ಇಂತಹ ನೋಟಿಸ್ಗಳ ಕುರಿತು ಪೀಠದ ತೀರ್ಪುಗಳಿಗೆ ಅನುಗುಣವಾಗಿಲ್ಲ, ಹೀಗಾಗಿ ಅವುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಉಪಸಭಾಪತಿ ಹರಿವಂಶ ತಿಳಿಸಿದರು.
ಟಿಎಂಸಿ ಮತ್ತು ಕಾಂಗ್ರೆಸ್ ಸಂಸದರು ಡುಪ್ಲಿಕೇಟ್ ಮತದಾರರ ಗುರುತಿನ ಚೀಟಿಯ ವಿಷಯವನ್ನು ಮತ್ತು ತಮಿಳು ಪಕ್ಷಗಳು ದಕ್ಷಿಣದ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಂತರದ ಪರಿಣಾಮಗಳ ಬಗ್ಗೆ ಚರ್ಚಿಸಲು ಬಯಸಿದ್ದವು.
ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿ ಚರ್ಚೆಗಾಗಿ ಒತ್ತಾಯಿಸಿದರಾದರೂ ಹರಿವಂಶ ಅವರು ಅವಕಾಶ ನಿರಾಕರಿಸಿದ ಬಳಿಕ ಸಭಾತ್ಯಾಗವನ್ನು ನಡೆಸಿದರು.
10 ಸಂಸದರು ನಿಯಮ 267ರಡಿ ನೋಟಿಸ್ಗಳನ್ನು ನೀಡಿದ್ದರು.
ಟಿಎಂಸಿಯ ಸುಖೇಂದು ಶೇಖರ ರಾಯ್, ಮೌಸಮ್ ಬಿ.ನೂರ್ ಮತ್ತು ಸುಷ್ಮಿತಾ ದೇವ್ ಹಾಗೂ ಕಾಂಗ್ರೆಸಿನ ಪ್ರಮೋದ ತಿವಾರಿ ವಿವಿಧ ರಾಜ್ಯಗಳಲ್ಲಿ ಹಲವಾರು ಡುಪ್ಲಿಕೇಟ್ ವಿದ್ಯುನ್ಮಾನ ಮತದಾರರ ಗುರುತಿನ ಚೀಟಿಗಳ ವಿತರಣೆಯಲ್ಲಿ ಚುನಾವಣಾ ಆಯೋಗದಿಂದ ಲೋಪಗಳ ಆರೋಪ ಕುರಿತು ಚರ್ಚೆಗೆ ಆಗ್ರಹಿಸಿದ್ದರೆ, ಡಿಎಂಕೆಯ ಪಿ.ವಿಲ್ಸನ್ ಮತ್ತು ಸಿಪಿಎಮ್ನ ವಿ.ಶಿವದಾಸನ್ ಅವರು ದಕ್ಷಿಣ ರಾಜ್ಯಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಕಳವಳಗಳ ಕುರಿತು ಚರ್ಚೆಗೆ ಒತ್ತಾಯಿಸಿದ್ದರು.
ಬಿಜೆಪಿಯ ಸಮಿಕ್ ಭಟ್ಟಾಚಾರ್ಯ ಅವರು ಪ.ಬಂಗಾಳದಲ್ಲಿ ಎಸ್ಸಿ/ಎಸ್ಟಿ/ಒಬಿಸಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಹಾಗೂ ಸಿಪಿಐನ ಪಿ.ಸಂತೋಷ್ ಕುಮಾರ್ ಅವರು ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಭಾರತದಲ್ಲಿ ಉಪಗ್ರಹ ಬ್ರಾಡ್ಬ್ರ್ಯಾಂಡ್ ಇಂಟರ್ನೆಟ್ ಒದಗಿಸಲು ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪರಿಣಾಮ ಕುರಿತು ಚರ್ಚೆಯನ್ನು ಬಯಸಿದ್ದರು.
ಆಪ್ನ ಸಂಜಯ ಸಿಂಗ್ ಅವರು ದಿಲ್ಲಿಯಲ್ಲಿ ಅಪರಾಧಗಳ ಹೆಚ್ಚಳ ಹಾಗೂ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಚರ್ಚೆಗೆ ಮತ್ತು ಐಯುಎಂಎಲ್ನ ಹ್ಯಾರಿಸ್ ಬೀರಾನ್ ಅವರು ಕೇರಳದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ವ್ಯಸನ ಹೆಚ್ಚುತ್ತಿರುವ ಬಗ್ಗೆ ಚರ್ಚೆಗಾಗಿ ಆಗ್ರಹಿಸಿದ್ದರು.