ಮಣಿಪುರ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಆಗ್ರಹದ ನಡುವೆಯೇ ರಾಜ್ಯಸಭೆ ಮುಂದೂಡಿಕೆ
ರಾಜ್ಯಸಭೆ | Photo: PTI
ಹೊಸದಿಲ್ಲಿ: ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗಾಗಿ ಪ್ರತಿಪಕ್ಷಗಳ ಆಗ್ರಹದಿಂದ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.
ಭೋಜನೋತ್ತರ ಅವಧಿಯಲ್ಲಿ ಲಿಸ್ಟ್ ಮಾಡಲಾಗಿದ್ದ ಕಾಗದಪತ್ರಗಳು ಮತ್ತು ಸಿನೆಮಾಟೋಗ್ರಾಫ್ (ತಿದ್ದುಪಡಿ ) ಮಸೂದೆ ಮಂಡನೆಯ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಬೆಳಗ್ಗಿ ನ ಕಲಾಪದ ಅವಧಿಯಲ್ಲಿಯೂ ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಸದನವು ಮುಂದೂಡಲ್ಪಟ್ಟಿತ್ತು.
ಭೋಜನದ ಬಳಿಕ ಸದನವು ಮರುಸಮಾವೇಶಗೊಂಡಾಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಸಿನೆಮಾಟೋಗ್ರಾಫ್ (ತಿದ್ದುಪಡಿ ) ಮಸೂದೆಯನ್ನು ಮಂಡಿಸುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಮಸೂದೆಯು ಕೋಲಾಹಲದ ನಡುವೆಯೇ ಧ್ವನಿಮತದೊಂದಿಗೆ ಅಂಗೀಕಾರಗೊಂಡಿತು.
ಮಣಿಪುರ ಸಮಸ್ಯೆ ಕುರಿತು ಚರ್ಚೆಗಾಗಿ ತಾನು ಬೆಳಿಗ್ಗೆಯಿಂದಲೂ ಆಗ್ರಹಿಸುತ್ತಿದ್ದೇನೆ,ಆದರೆ ಮುಂಚಿತವಾಗಿ ನೋಟಿಸ್ ನೀಡಿದ್ದರೂ ಅವಕಾಶವನ್ನು ನೀಡಲಿಲ್ಲ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು,
‘ನಿಮ್ಮ (ಸಭಾಪತಿ) ಗಮನವನ್ನು ಸೆಳೆಯಲು ನಾನು ನನ್ನ ಪೂರ್ಣ ಪ್ರಯತ್ನವನ್ನು ಮಾಡಿದ್ದೇನೆ ಮತ್ತು ನೋಟಿಸನ್ನೂ ನೀಡಿದ್ದೇನೆ, ಆದರೆ ದುರದೃಷ್ಟವಶಾತ್ ನಿಯಮ 267 ರಡಿ ಇದನ್ನು ಪ್ರಸ್ತಾವಿಸಲು ನನಗೆ ಅವಕಾಶ ನೀಡಲಾಗಿಲ್ಲ. ಮಣಿಪುರ ಹೊತ್ತಿ ಉರಿಯುತ್ತಿದೆ,ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಮತ್ತು ಅವರನ್ನು ಬೆತ್ತಲೆ ಮೆರವಣಿಗೆ ಮಾಡಲಾಗುತ್ತಿದೆ. ಪ್ರಧಾನಿಯವರು ಸದನದಲ್ಲಿ ವೌನವಾಗಿದ್ದಾರೆ,ಅವರು ಹೊರಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ’ ಎಂದು ದಾಳಿ ನಡೆಸಿದರು.
ಸದನದಲ್ಲಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಸಭಾಪತಿ ಜಗದೀಪ ಧನ್ಕರ್ ಅವರ ಮನವಿಗಳು ವಿಫಲಗೊಂಡಾಗ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.