ಫುಟ್ಪಾತ್ನಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ಕಾರು ಹರಿಸಿದ ಸಂಸದನ ಪುತ್ರಿಗೆ ಜಾಮೀನು
Photo : NDTV
ಹೊಸದಿಲ್ಲಿ: ಪುಣೆಯ ಪೋಶ್ರ್ಚ್ ಅಪಘಾತ ಪ್ರಕರಣ ಸಂಭವಿಸಿದ ಒಂದು ತಿಂಗಳ ಒಳಗಾಗಿ, ರಾಜ್ಯಸಭಾ ಸದಸ್ಯರೊಬ್ಬರ ಪುತ್ರಿ ತಮ್ಮ ಬಿಎಂಡಬ್ಲ್ಯು ಕಾರನ್ನು ಫುಟ್ಪಾತ್ ಮೇಲೆ ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ಹರಿಸಿ, ಆತನ ಸಾವಿಗೆ ಕಾರಣರಾದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಇದೀಗ ಜಾಮೀನು ಪಡೆದಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಬೀಡ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ಸೋಮವಾರ ರಾತ್ರಿ ತಮ್ಮ ಸ್ನೇಹಿತೆಯ ಜತೆಗೆ ಬಿಎಂಡಬ್ಲ್ಯು ಕಾರು ಚಲಾಯಿಸುತ್ತಿದ್ದರು. ಈಕೆ ಚಲಾಯಿಸುತ್ತಿದ್ದ ಕಾರು ಚೆನ್ನೈನ ಬೆಸೆಂಟ್ ನಗರದಲ್ಲಿ ಪಾನಮತ್ತನಾಗಿ ಫುಟ್ಪಾತ್ನಲ್ಲಿ ನಿದ್ರಿಸುತ್ತಿದ್ದ ಪೇಂಟರ್ ಸೂರ್ಯ (24) ಎಂಬಾತನ ಮೇಲೆ ಹರಿದಿತ್ತು.
ಘಟನೆಯ ಬೆನ್ನಲ್ಲೇ ಮಾಧುರಿ ಪಲಾಯನ ಮಾಡಿದ್ದು, ಅಪಘಾತ ಸ್ಥಳದಲ್ಲಿ ಸೇರಿದ ಜನರ ಜತೆ ಆಕೆಯ ಸ್ನೇಹಿತೆ ವಾದಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಅವರೂ ಘಟನಾ ಸ್ಥಳದಿಂದ ತೆರಳಿದ್ದರು. ಸೇರಿದ್ದವರ ಪೈಕಿ ಕೆಲವರು ಸೂರ್ಯನನ್ನು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟ.
ಸೂರ್ಯ ಎಂಟು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಅವರ ಸಂಬಂಧಿಕರು ಮತ್ತು ಸ್ನೇಹಿತರು ಜೆ-5 ಶಾಸ್ತ್ರಿನಗರ ಠಾನೆಯ ಎದುರು ಗುಂಪು ಸೇರಿ ಕ್ರಮಕ್ಕೆ ಆಗ್ರಹಿಸಿದರು. ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ ಪೊಲೀಸರು, ಈ ಕಾರು ಬೀಡಾ ಮಸ್ತಾನ್ ರಾವ್ ಅವರಿಗೆ ಸೇರಿದ್ದು ಎನ್ನುವುದನ್ನು ಪತ್ತೆ ಮಾಡಿದರು. ಮಾಧುರಿಯನ್ನು ಬಂಧಿಸಲಾಯಿತು. ಆದರೆ ಪೊಲೀಸ್ ಠಾಣೆಯಲ್ಲೇ ಜಾಮೀನು ಮಂಜೂರು ಮಾಡಲಾಯಿತು.
ರಾವ್ 2022ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಶಾಸಕರೂ ಆಗಿದ್ದರು. ಸಾಗರ ಆಹಾರ ಉದ್ಯಮದಲ್ಲಿ ಬಿಎಂಆರ್ ಸಮೂಹ ಪ್ರಖ್ಯಾತ ಹೆಸರು.