20 ತಿಂಗಳುಗಳಿಂದ ಖಾಲಿ ಇರುವ ರಾಜ್ಯಸಭಾ ನಾಮನಿರ್ದೇಶನ ಸ್ಥಾನ
Photo: PTI
ಹೊಸದಿಲ್ಲಿ: ರಾಜ್ಯಸಭೆಯ ಎರಡು ನಾಮ ನಿರ್ದೇಶನ ಸ್ಥಾನಗಳು ಕಳೆದ 20 ತಿಂಗಳುಗಳಿಂದ ಖಾಲಿ ಉಳಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದರಿಂದ ಶಾಸನಾತ್ಮಕ ಕಾರ್ಯನಿರ್ವಹಣೆಗೆ ಯಾವುದೇ ಪರಿಣಾಮ ಇಲ್ಲದಿದ್ದರೂ, ಈ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಸುಲಭ ಅವಕಾಶಗಳಿದ್ದರೂ, ಇಷ್ಟು ಸುಧೀರ್ಘ ಅವಧಿಗೆ ಅದನ್ನು ಖಾಲಿ ಇಟ್ಟಿರುವುದು ಅಚ್ಚರಿಯ ಅಂಶವಾಗಿದೆ.
ಸಾಹಿತ್ಯ, ವಿಜ್ಞಾನ ಮತ್ತು ಸಮಾಜಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ಹನ್ನೆರಡು ಮಂದಿ ಸದಸ್ಯರನ್ನು ರಾಜ್ಯಸಭೆಗೆ ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುತ್ತಾರೆ.
2022ರ ಏಪ್ರಿಲ್-ಮೇ ತಿಂಗಳಲ್ಲಿ ನಾಮನಿರ್ದೇಶನ ಕೋಟಾದಡಿ ಏಳು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದವು. ಇದಕ್ಕೆ ನಾಲ್ಕು ತಿಂಗಳ ಒಳಗಾಗಿ ಪಿ.ಟಿ.ಉಷಾ (ಅಥ್ಲೆಟಿಕ್ಸ್), ಡಿ.ವೀರೇಂದ್ರ ಹೆಗ್ಗಡೆ (ಸಮಾಜಸೇವೆ), ವಿ.ವಿಜಯೇಂದ್ರ ಪ್ರಸಾದ್ (ಚಿತ್ರಕಥೆ ರಚನೆಗಾರ- ನಿರ್ದೇಶಕ) ಮತ್ತು ಇಳೆಯರಾಜ (ಸಂಗೀತ ಸಂಯೋಜಕ) ಅವರನ್ನು ನೇಮಕ ಮಾಡಲಾಗಿತ್ತು. 2022ರ ಸೆಪ್ಟೆಂಬರ್ ನಲ್ಲಿ ಗುಲಾಂ ಅಲಿಯವರನ್ನು ಕೂಡಾ ಈ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆದರೆ ಎರಡು ಸ್ಥಾನಗಳು ಮಾತ್ರ 2022ರ ಮೇ ತಿಂಗಳಿಂದ ಖಾಲಿ ಉಳಿದಿವೆ.
ನಾಮನಿರ್ದೇಶಿತ ಸದಸ್ಯರಿಗೆ ಇತರ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಸಿಗುವ ಎಲ್ಲ ಅಧಿಕಾರಗಳು, ವಿಶೇಷ ಹಕ್ಕುಗಳು ಸಿಗುತ್ತವೆ. ಇತರ ಸದಸ್ಯರಂತೆ ಕಲಾಪದಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರುತ್ತದೆ. ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಇರುವುದಿಲ್ಲ. ಆದರೆ ಉಪರಾಷ್ಟ್ರಪತಿ ಆಯ್ಕೆಗೆ ನಡೆಯುವ ಮತದಾನದಲ್ಲಿ ಅವರು ಪಾಲ್ಗೊಳ್ಳಬಹುದಾಗಿದೆ.