ರಾಜ್ಯಸಭಾಧ್ಯಕ್ಷ ಧನ್ಕರ್ ವಜಾಕ್ಕೆ ಪ್ರತಿಪಕ್ಷ ಪಟ್ಟು ‘ಅವಿಶ್ವಾಸ’ ಗದ್ದಲಕ್ಕೆ ರಾಜ್ಯಸಭಾ ಕಲಾಪ ಬಲಿ
ಜಗದೀಪ್ ಧನ್ಕರ್ | PC : PTI
ಹೊಸದಿಲ್ಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನ್ಕರ್ ಅವರ ವಜಾ ಆಗ್ರಹಿಸಿ ಮಂಡಿಸಲಾದ ಅವಿಶ್ವಾಸ ನಿರ್ಣಯದ ಕುರಿತ ಚರ್ಚೆಯ ಸಂದರ್ಭ ಪ್ರತಿಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಕೋಲಾಹಲವೆಬ್ಬಿಸಿದ್ದರಿಂದ, ಕಲಾಪಗಳು ನಡೆಯಲು ಸಾಧ್ಯವಾಗದೆ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಇಂದು ರಾಜ್ಯಸಭೆಯಲ್ಲಿ ಕಲಾಪವು ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಧನಕರ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು ಹಾಗೂ ಕಲಾಪಚಟುವಟಿಕೆಗಳಿಗೆ ಅಡ್ಡಿಪಡಿಸಿದರು ಮತ್ತು ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆಯಾಗಬೇಕೆಂದು ಆಗ್ರಹಿಸಿದರು.
ಆದರೆ ರಾಜ್ಯಸಭಾಧ್ಯಕ್ಷ ಧನಕರ್ ಅವರು ಪಟ್ಟಿಮಾಡಿದ ಕಲಾಪಗಳ ಕಾರ್ಯಸೂಚಿಯಂತೆ ಸದನವನ್ನು ನಡೆಸಲು ಪ್ರಯತ್ನಿಸಿದಾಗ ಪ್ರತಿಪಕ್ಷ ಸದಸ್ಯರ ಗದ್ದಲ ಇನ್ನಷ್ಟು ತೀವ್ರಗೊಂಡಿತು. ಆಗ ಕಲಾಪಗಳನ್ನು ನಡೆಸುವುದು ಸಾಧ್ಯವಾಗದೆ ರಾಜ್ಯಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ 12:00 ಗಂಟೆಯವರೆಗೆ ಮುಂದೂಡಿದರು. ಆನಂತರ ಮತ್ತೆ ಸದನ ಸೇರಿದಾಗಲೂ ಕೋಲಾಹಲ ನಿಲ್ಲದೆ ಇದ್ದುದರಿಂದ ಧನಕರ್ ಅವರು ಕಲಾಪಗಳನ್ನು ಗುರುವಾರಕ್ಕೆ ಮುಂದೂಡಿದರು.
ಮೇಲ್ಮನೆಯ ಅಧ್ಯಕ್ಷರಾಗಿ ಧನಕರ್ ಅವರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಇಂಡಿಯಾ ಪ್ರತಿಪಕ್ಷ ಮ್ತೈತ್ರಿಕೂಟವು ಬುಧವಾರ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು.
ಕಾಂಗ್ರೆಸ್, ಆರ್ಜೆಡಿ, ಟಿಎಂಸಿ, ಸಿಪಿಐ, ಸಿಪಿಎಂ,ಜೆಎಂಎಂ, ಎಎಪಿ, ಡಿಎಂಕೆ ಹಾಗೂ ಎಸ್ಪಿ ಮತ್ತಿತರ ಪ್ರತಿಪಕ್ಷಗಳ 60ಕಕ್ಕೂ ಅಧಿಕ ಸಂಸದರು ಅವಿಶ್ವಾಸ ನಿರ್ಣಯ ನೋಟಿಸ್ಗೆ ಸಹಿಹಾಕಿದ್ದರು. ಅವಿಶ್ವಾಸ ನಿರ್ಣಯ ನೋಟಿಸನ್ನು ಪ್ರತಿಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಹಾಗೂ ನಸೀರ್ ಹುಸೈನ್ ಅವರು ರಾಜ್ಯಸಭಾದ ಮಹಾಕಾರ್ಯದರ್ಶಿ ಪಿ.ಸಿ. ಮೋದಿ ಅವರಿಗೆ ಸಲ್ಲಿಸಿದರು.