ರಾಮ ಮಂದಿರದ ಮೇಲೆ ದಾಳಿ : ಖಾಲಿಸ್ತಾನಿ ಭಯೋತ್ಪಾದಕ ಪನ್ನೂನ್ ಬೆದರಿಕೆ
ರಾಮ ಮಂದಿರ | PTI
ಹೊಸದಿಲ್ಲಿ : ಖಾಲಿಸ್ತಾನಿ ಭಯೋತ್ಪಾದಕ ಗುರಪತ್ವಂತ್ ಸಿಂಗ್ ಪನ್ನೂನ್ ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಹಿಂದು ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಬೆದರಿಕೆಗಳನ್ನು ಒಡ್ಡಿದ್ದಾನೆ.
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸಂಘಟನೆಯು ಬಿಡುಗಡೆ ಮಾಡಿರುವ ವೀಡಿಯೊವೊಂದರಲ್ಲಿ ನ.16 ಮತ್ತು 17ರಂದು ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ಕೆನಡಾದ ಬ್ರಾಂಪ್ಟ್ನ್ ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿರುವ ವೀಡಿಯೊ, ಹಿಂದು ಪೂಜಾ ಸ್ಥಳಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ.
ಹಿಂಸಾತ್ಮಕ ಹಿಂದುತ್ವ ಸಿದ್ಧಾಂತ ಜನ್ಮಸ್ಥಳವಾದ ಅಯೋಧ್ಯೆಯ ಬುನಾದಿಯನ್ನೇ ನಾವು ಅಲುಗಾಡಿಸುತ್ತೇವೆ ಎಂದು ಪನ್ನೂನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು,ಇದು ಹಿಂದುಗಳ ಅತ್ಯಂತ ಪವಿತ್ರ ಸ್ಥಳಗಳಲ್ಲೊಂದಾಗಿರುವ ಅಯೋಧ್ಯೆಗೆ ನೇರ ಬೆದರಿಕೆಯಾಗಿದೆ. ಈ ವರ್ಷದ ಜನವರಿಯಲ್ಲಿ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರದಲ್ಲಿ ಪ್ರಾರ್ಥಿಸುತ್ತಿದ್ದ ಚಿತ್ರವನ್ನೂ ವೀಡಿಯೊ ತೋರಿಸಿದೆ.
ಹಿಂದು ದೇವಸ್ಥಾನಗಳ ಮೇಲೆ ಖಾಲಿಸ್ತಾನಿ ದಾಳಿಗಳಿಂದ ದೂರವುಳಿಯುವಂತೆ ಕೆನಡಾದಲ್ಲಿರುವ ಭಾರತೀಯರಿಗೂ ಪನ್ನೂನ್ ಎಚ್ಚರಿಕೆ ನೀಡಿದ್ದಾನೆ.
ಕಳೆದ ತಿಂಗಳೂ ಪನ್ನೂನ್, 1984ರ ಸಿಖ್ ಹತ್ಯಾಕಾಂಡಕ್ಕೆ 40 ವರ್ಷಗಳು ತುಂಬುತ್ತಿದ್ದು,ನ.1 ಮತ್ತು 19ರ ನಡುವೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದ.
ಪನ್ನೂನ್ ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರಕ್ಕೂ ಕರೆ ನೀಡಿದ್ದು,ಇದು ಭಾರತೀಯ ಮತ್ತು ವಲಸಿಗ ಸಮುದಾಯಗಳಲ್ಲಿ ಅಶಾಂತ ಮತ್ತು ಉದ್ವಿಗ್ನತೆಯನ್ನು ಪ್ರಚೋದಿಸುವ ವ್ಯಾಪಕ ಪ್ರಯತ್ನವನ್ನು ಸೂಚಿಸುತ್ತಿದೆ.
ಪನ್ನೂನ್ ನ ಎಸ್ಎಫ್ಜೆ ಹಲವಾರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು,ಜುಲೈ 2020ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪನ್ನೂನ್ ನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಭಾರತ ಸರಕಾರವು ಆತನ ಬಂಧನಕ್ಕಾಗಿ ಹಲವಾರು ವಾರಂಟ್ಗಳನ್ನು ಸಹ ಹೊರಡಿಸಿದೆ. ಆದಾಗ್ಯೂ ಆತ ಅಮೆರಿಕ ಮತ್ತು ಕೆನಡಾದಿಂದ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಿದ್ದಾನೆ.