ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಧ್ವಂಸ ಹೇಳಿಕೆ | ಪ್ರಧಾನಿ ಮೋದಿಗೆ ಸಲ್ಮಾನ್ ಖುರ್ಷಿದ್ ತರಾಟೆ
ನರೇಂದ್ರ ಮೋದಿ , ಸಲ್ಮಾನ್ ಖುರ್ಷಿದ್ | PC : PTI
ಪಾಟ್ನಾ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ನ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖುರ್ಷೀದ್ ಅವರು, ಸುಪ್ರೀಂ ಕೋರ್ಟ್ನ ತೀರ್ಪಿಗೆ ಅನುಗುಣವಾಗಿ ನಿರ್ಮಾಣ ಮಾಡಲಾದ ದೇವಾಲಯವನ್ನು ಸಂಪೂರ್ಣ ದೇಶ ಸ್ವೀಕರಿಸಿದೆ ಎಂದು ಕೂಡ ಮೋದಿ ಅವರಿಗೆ ನೆನಪಿಸಿದರು.
ದೇವಾಲಯದ ನಿರ್ಮಾಣದ ಶ್ರೇಯಸ್ಸು ಅವರಿಗೆ ಸಲ್ಲುವುದಿಲ್ಲ, ಸುಪ್ರೀಂಕೋರ್ಟ್ಗೆ ಸಲ್ಲುತ್ತದೆ ಎಂಬುದನ್ನು ಪ್ರಧಾನಿ ಅವರು ನೆನಪಿನಲ್ಲಿ ಇರಿಸಿಕೊಳ್ಳಬೇಕು. ದೇವರು ಎಲ್ಲರಿಗೂ ಸೇರಿದ್ದು. ಆದರೆ, ಪ್ರಧಾನಿ ಮೋದಿ ಅವರು ಈ ರೀತಿ ಮಾತನಾಡುವುದು ದುರಾದೃಷ್ಟಕರ ಎಂದು ಅವರು ಹೇಳಿದರು.
ಯುಪಿಎ ಸರಕಾರದಲ್ಲಿ ಕಾನೂನು ಹಾಗೂ ನ್ಯಾಯ, ಅಲ್ಪಸಂಖ್ಯಾತರ ವ್ಯವಹಾರಗಳಂತಹ ಖಾತೆಯನ್ನು ನಿರ್ವಹಿಸಿದ್ದ ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಖುರ್ಷಿದ್ ಅವರು, ನಮ್ಮ ಪಕ್ಷಕ್ಕೆ ಕಾನೂನಿನ ಮೇಲೆ ನಂಬಿಕೆ ಇದೆ. ನಾವು ಯಾವುದೇ ಆರಾಧನ ಕೇಂದ್ರದ ಮೇಲೆ ಬುಲ್ಡೋಜರ್ ಹರಿಸಲು ಬಯಸುವುದಿಲ್ಲ ಎಂದರು.
ನಾವು ಜಾನುವಾರುಗಳ ಮಾಲಕರಿಂದ ಎಮ್ಮೆಗಳನ್ನು ಕೊಂಡೊಯ್ಯುತ್ತೇವೆ ಹಾಗೂ ಮಹಿಳೆಯರ ಮಾಂಗಲ್ಯವನ್ನು ದೋಚುತ್ತೇವೆ ಎಂದು ಮೋದಿ ಅವರು ಇತ್ತೀಚೆಗಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಮಾಡಿದ ಆರೋಪಗಳ ಕುರಿತು ಅವರು ಅಪಹಾಸ್ಯ ಮಾಡಿದರು.
ಪಾಟ್ನಾದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರೊಂದಿಗೆ ಎಐಸಿಸಿಯ ರಾಜ್ಯ ಉಸ್ತುವಾರಿ ಮೋಹನ್ ಪ್ರಕಾಶ್ ಕೂಡ ಇದ್ದರು.
ನಮ್ಮ ಪ್ರಣಾಕೆಯಲ್ಲಿ ಮುಸ್ಲಿಂ ಲೀಗ್ನ ಛಾಪು ಇದೆ ಎಂದು ಪ್ರದಾನಿ ಅವರು ಪ್ರತಿಪಾದಿಸಿದ್ದಾರೆ. ಇಂತಹ ಹೋಲಿಕೆಯನ್ನು ಮಾಡಲು ಅವರು ಮುಸ್ಲಿಂ ಲೀಗ್ನ ಪ್ರಣಾಳಿಕೆಯನ್ನು ಯಾವಾಗ ಓದಿದರು ಎಂದು ನಮಗೆ ಹೇಳಬೇಕು ಎಂದು ಖುರ್ಷಿದ್ ಹೇಳಿದರು.
ಈ ಹಿಂದಿನ ಯಾವುದೇ ಪ್ರಧಾನಿ ಕೂಡ ಮೋದಿ ಅವರಂತೆ ಜನರನ್ನು ಪ್ರಚೋದಿಸುವ ಕೆಲಸವನ್ನು ಎಂದಿಗೂ ಮಾಡಲಿಲ್ಲ. ಅವರು ಪದೇ ಪದೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರು ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ದರಾಗಿಲ್ಲ ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಜಯ ಗಳಿಸುತ್ತೆವೆ ಎಂದು ನಮಗೆ ನಂಬಿಕೆ ಇದೆ. ಒಮ್ಮೆ ನಾವು ಅಧಿಕಾರಕ್ಕೆ ಬಂದರೆ, ಅಗ್ನಿವೀರ್ ಯೋಜನೆ ರದ್ದು ಹಾಗೂ ಬಡವರಿಗೆ 10 ಕಿ.ಗ್ರಾಂ. ಅಕ್ಕಿ ನೀಡುವಂತಹ ಭರವಸೆಯನ್ನು ಈಡೇರಿಸುತ್ತೇವೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.