ಅಯೋಧ್ಯೆ ಕಾರ್ಯಕ್ರಮ ʼಭಾರತವರ್ಷ ಪುನರ್ ನಿರ್ಮಾಣʼಅಭಿಯಾನಕ್ಕೆ ಚಾಲನೆ ನೀಡಿದೆ: ಮೋಹನ್ ಭಾಗವತ್
ಮೋಹನ್ ಭಾಗವತ್ (PTI)
ಹೊಸದಿಲ್ಲಿ: ಅಯೋಧ್ಯೆಯ ಜನ್ಮ ಸ್ಥಳದಲ್ಲಿ ರಾಮ್ ಲಲ್ಲಾನ ‘‘ಪ್ರವೇಶ’’ ಹಾಗೂ ದೇವಾಲಯದ ‘‘ಪ್ರಾಣ ಪ್ರತಿಷ್ಠೆ’’ ಕಾರ್ಯಕ್ರಮ ಸಾಮರಸ್ಯ, ಪ್ರಗತಿ, ಶಾಂತಿ ಹಾಗೂ ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ‘‘ಭಾರತವರ್ಷ ಪುನರ್ ನಿರ್ಮಾಣ’’ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರವಿವಾರ ಹೇಳಿದ್ದಾರೆ.
ಆರೆಸ್ಸೆಸ್ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಿದ ಲೇಖನದಲ್ಲಿ ಭಾಗವತ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಹಿಂದೂ ಸಮಾಜ ನಿರಂತರ ಹೋರಾಟ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ ಹಾಗೂ ವಿವಾದದ ಕುರಿತ ‘‘ಸಂಘರ್ಷ ಹಾಗೂ ಕಹಿ’’ ಈಗ ಅಂತ್ಯಗೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ವಾಸ್ತವಾಂಶವನ್ನು ಪರಿಶೀಲಿಸಿ ಹಾಗೂ ಎಲ್ಲಾ ವಾದಿ-ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ 2019 ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಸಮತೋಲನದ ತೀರ್ಪು ನೀಡುವುದರೊಂದಿಗೆ ಹಲವು ವರ್ಷಗಳ ಕಾನೂನು ಹೋರಾಟ ಅಂತ್ಯವಾಗಿತ್ತು ಎಂದು ಅವರು ತಿಳಿಸಿದರು.
ಧರ್ಮದ ನೆಲೆಯಿಂದ ನೋಡಿದರೆ ಭಗವಾನ್ ರಾಮ ದೇಶದ ಬಹುಸಂಖ್ಯಾತ ಸಮಾಜದ ಹೆಚ್ಚಿನ ಜನರು ಪೂಜಿಸುವ ದೇವರು. ಅಲ್ಲದೆ ಸಂಪೂರ್ಣ ಸಮಾಜ ಆತನನ್ನು ಆದರ್ಶ ಪುರುಷನನ್ನಾಗಿ ಸ್ವೀಕರಿಸಿದೆ ಎಂದು ಭಾಗವತ್ ಹೇಳಿದರು.
‘‘ಅಯೋಧ್ಯೆ ಎಂದರೆ ಯುದ್ಧವಿಲ್ಲದ ನಗರ, ಸಂಘರ್ಷವಿಲ್ಲದ ಮಕ್ತ ಸ್ಥಳ ಎಂದರ್ಥ. ಈ ಸಂದರ್ಭ ದೇಶದಲ್ಲಿ ಅಯೋಧ್ಯೆಯನ್ನು ಮರು ನಿರ್ಮಾಣ ಮಾಡುವುದು ಅಗತ್ಯ. ಅಲ್ಲದೆ ಇದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು’’ ಎಂದು ಅವರು ತಿಳಿಸಿದರು.
ಶ್ರೀರಾಮನ ಹಿಂದಿರುವ ಜೀವನ ದೃಷ್ಟಿಕೋನವನ್ನು ಆಧುನಿಕ ಭಾರತೀಯ ಸಮಾಜ ಸ್ವೀಕರಿಸಿರುವುದನ್ನು ಕೂಡ ಇದು ಸೂಚಿಸಿದೆ ಎಂದು ಭಾಗವತ್ ಹೇಳಿದ್ದಾರೆ.