ರಾಮ ಮಂದಿರವು ಭಾರತದ ಇತಿಹಾಸದಲ್ಲಿ ದಾಖಲು : ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ರೌಪದಿ ಮುರ್ಮು | Photo: PTI
ಹೊಸದಿಲ್ಲಿ : ರಾಮ ಮಂದಿರವು ಭಾರತದ ನಾಗರಿಕ ಪರಂಪರೆಯ ನಿರಂತರ ಮರುಶೋಧನೆಯ ದ್ಯೋತಕವಾಗಿ ಮತ್ತು ಭವ್ಯ ಕಟ್ಟಡವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಅದು ಜನರ ನಂಬಿಕೆಯನ್ನು ಸೂಕ್ತವಾಗಿ ಅಭಿವ್ಯಕ್ತಿಸುವ ಜೊತೆಗೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅವರ ಅಗಾಧ ವಿಶ್ವಾಸಕ್ಕೂ ಸಾಕ್ಷಿಯಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಹೇಳಿದರು.
75ನೇ ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸರಕಾರದ ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ನಿರ್ವಸಿತರು ಅಪರೂಪವಾಗಿರುವ ಕೆಲವೇ ದೇಶಗಳ ಗುಂಪಿನಲ್ಲಿ ಭಾರತವು ಸೇರಿದಾಗ ಅಂದು ದೇಶಕ್ಕೆ ಹೆಮ್ಮೆಯ ದಿನವಾಗಲಿದೆ ಎಂದರು.
ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆಯೂ ಪ್ರಸ್ತಾವಿಸಿದ ರಾಷ್ಟ್ರಪತಿಗಳು,ಕಾರಣಗಳ ಹಿನ್ನೆಲೆಯಲ್ಲಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು,ದುರದೃಷ್ಟವಶಾತ್ ಕಾರಣಗಳ ಬದಲಾಗಿ ಭೀತಿ ಮತ್ತು ಪೂರ್ವಾಗ್ರಹಗಳು ಭಾವೋದ್ವೇಗಗಳನ್ನು ಹೆಚ್ಚಿಸಿವೆ ಮತ್ತು ಇದು ನಿರಂತರ ಹಿಂಸೆಗೆ ಕಾರಣವಾಗಿದೆ ಎಂದು ಒತ್ತಿ ಹೇಳಿದರು.
ವರ್ಧಮಾನ ಮಹಾವೀರ, ಸಾಮ್ರಾಟ ಅಶೋಕ ಮತ್ತು ಮಹಾತ್ಮಾ ಗಾಂಧಿಯವರ ಬೋಧನೆಗಳನ್ನು ಉಲ್ಲೇಖಿಸಿದ ಅವರು, ಸಂಘರ್ಷಗಳಲ್ಲಿ ಸಿಕ್ಕಿಕೊಂಡಿರುವ ಪ್ರದೇಶಗಳು ಅವುಗಳನ್ನು ಬಗೆಹರಿಸಿಕೊಳ್ಳಲು ಮತ್ತು ನೆಮ್ಮದಿ ನೆಲೆಸುವಂತಾಗಲು ಶಾಂತಿಯುತ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುತ್ತವೆ ಎಂದು ಆಶಿಸೋಣ ಎಂದರು.
ಭಾರತವು ಆಯೋಜಿಸಿದ್ದ ಭವ್ಯ ಜಿ20 ಶೃಂಗಸಭೆಯು ಅಂತಿಮವಾಗಿ ತಮ್ಮ ಭವಿಷ್ಯವನ್ನು ರೂಪಿಸುವ ವ್ಯೆಹಾತ್ಮಕ ಮತ್ತು ರಾಜತಾಂತ್ರಿಕ ವಿಷಯಗಳಲ್ಲಿ ನಾಗರಿಕರನ್ನು ಭಾಗಿಯಾಗಿಸುವ ಕುರಿತು ಎಲ್ಲರಿಗೂ ಪಾಠವನ್ನು ಬೋಧಿಸಿದೆ ಎಂದು ರಾಷ್ಟ್ರಪತಿಗಳು ಹೇಳಿದರು.
ದೇಶದ ಆರ್ಥಿಕತೆಯ ಕುರಿತು ಮಾತನಾಡಿದ ಅವರು, ಭಾರತವು ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಇದನ್ನು ಆರ್ಥಿಕ ಸದೃಢತೆಯು ಪ್ರತಿಬಿಂಬಿಸುತ್ತಿದೆ ಎಂದರು.
ದೇಶವು ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿದೆ,ಇದು ಯುಗ ಪರಿವರ್ತನೆಯ ಸಮಯವಾಗಿದೆ ಎಂದು ಒತ್ತಿ ಹೇಳಿದ ಮುರ್ಮು, ಭಾರತವು ತನ್ನ ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರ್ಣಗೊಳಿಸಿದಾಗ ಅದನ್ನು ಶ್ರೀಮಂತ ದೇಶವನ್ನಾಗಿಸಲು ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಕರ್ತವ್ಯಗಳಿಗೆ ಬದ್ಧರಾಗಿರುವಂತೆ ನಾಗರಿಕರಿಗೆ ಕರೆ ನೀಡಿದರು.
ಅಮೃತಕಾಲ ಅವಧಿಯು ಅಭೂತಪೂರ್ವ ತಂತ್ರಜ್ಞಾನ ಬದಲಾವಣೆಗಳ ಅವಧಿಯೂ ಆಗಿರಲಿದೆ ಎಂದು ಹೇಳಿದ ರಾಷ್ಟ್ರಪತಿಗಳು,ನಾವು ಯುವಜನರ ದಾರಿಯಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು ಮತ್ತು ಅವರು ತಮ್ಮ ಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಈ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರನ್ನು ಸ್ಮರಿಸಿದ ರಾಷ್ಟ್ರಪತಿಗಳು, ಅವರು ಸಾಮಾಜಿಕ ನ್ಯಾಯದ ದಣಿವರಿಯದ ಹೋರಾಟಗಾರರಾಗಿದ್ದರು ಎಂದು ಬಣ್ಣಿಸಿದರು. ಹಿಂದುಳಿದ ವರ್ಗಗಳ ಮಹಾನ್ ಪ್ರತಿಪಾದಕರಲ್ಲಿ ಓರ್ವರಾಗಿದ್ದ ಕರ್ಪೂರಿ ಠಾಕೂರ್ ಅವರ ಏಳಿಗೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.