ರಾಜಕೀಯ ಸ್ಪರ್ಧೆಯನ್ನು 'ವೋಟ್ ಜಿಹಾದ್' ಎಂದು ಕರೆಯುವುದು ತಪ್ಪು: ರಾಮ ಮಂದಿರ ಟ್ರಸ್ಟ್ ಕೋಶಾಧಿಕಾರಿ ಪ್ರತಿಕ್ರಿಯೆ
ಸ್ವಾಮಿ ಗೋವಿಂದದೇವ ಗಿರಿ | Facebook
ಪುಣೆ: ರಾಜಕೀಯ ಹೋರಾಟವನ್ನು( ಚುನಾವಣಾ ಸ್ಪರ್ಧೆಯನ್ನು) ‘ವೋಟ್ ಜಿಹಾದ್’ ಎಂದು ಬಣ್ಣಿಸುವುದು ತಪ್ಪು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕೋಶಾಧಿಕಾರಿ ಸ್ವಾಮಿ ಗೋವಿಂದದೇವ ಗಿರಿ ಹೇಳಿದ್ದು, ಹಿಂದೂ ಸಮಾಜವು ಅದನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವೋಟ್ ಜಿಹಾದ್ ಗೆ 'ಧರ್ಮ-ಯುದ್ಧ'ದ ಮೂಲಕ ಪ್ರತಿಕ್ರಿಯಿಸುವಂತೆ ಕರೆ ನೀಡಿದ್ದರು. ಈ ಮಧ್ಯೆ ಸ್ವಾಮಿ ಗೋವಿಂದದೇವ ಅವರ ಹೇಳಿಕೆ ಹೊರಬಿದ್ದಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮಿ ಗೋವಿಂದದೇವ, ಯಾರಿಗೆ ಮತ ಹಾಕಬೇಕೆಂದು ಈ ಹಿಂದೆ ಕರಪತ್ರಗಳನ್ನು ಹಂಚುವ ಮೂಲಕ ಧಾರ್ಮಿಕ ಸ್ಥಳಗಳಿಂದ ವಿವೇಚನೆಯಿಂದ ನಿರ್ದೇಶನಗಳನ್ನು ನೀಡಲಾಗುತ್ತಿತ್ತು ಆದರೆ ಈಗ 'ವೋಟ್ ಜಿಹಾದ್' ನಂತಹ ಘೋಷಣೆಗಳನ್ನು ಬಹಿರಂಗವಾಗಿ ನೀಡಲಾಗುತ್ತಿದೆ.
'ಜಿಹಾದ್' ಎಂಬುದು ಧರ್ಮ-ಯುದ್ಧಕ್ಕೆ ಸಮಾನವಾಗಿದೆ. ಎರಡು ರಾಜಕೀಯ ಪಕ್ಷಗಳ ನಡುವಿನ ಹೋರಾಟವನ್ನು ‘ಯುದ್ಧ’ ಎಂದು ಕರೆಯುವುದು ಸರಿಯಲ್ಲ. ‘ವೋಟ್ ಜಿಹಾದ್’ ನ್ನು ಬಹಿರಂಗವಾಗಿ ಪ್ರತಿಪಾದಿಸಲಾಗುತ್ತಿರುವುದರಿಂದ ಅದನ್ನು ಹಿಂದೂ ಸಮಾಜವು ಹಿಂಜರಿಕೆಯಿಲ್ಲದೆ ವಿರೋಧಿಸಬೇಕಿದೆ ಎಂದು ಹೇಳಿದ್ದಾರೆ.
ಮತದಾನ ಉತ್ತಮ ನಾಗರಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ನಿಜವಾದ ಹಿಂದೂ ಮಾನವೀಯತೆಯ ಪರವಾಗಿರಬೇಕು ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸುವುದಾಗಿದೆ. ಇದಲ್ಲದೆ ನಾವು ಅನ್ಯಾಯವನ್ನು ಸಹಿಸಿಕೊಳ್ಳಬೇಕು ಎಂದು ಸ್ವಾಮಿ ಗೋವಿಂದದೇವ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ರ್ಯಾಲಿಗಳಲ್ಲಿ ಫಡ್ನವೀಸ್ ಅವರು ಇಸ್ಲಾಮಿಕ್ ವಿದ್ವಾಂಸ ಸಜ್ಜದ್ ನೊಮಾನಿ ಅವರ ವೀಡಿಯೊವನ್ನು ಪ್ಲೇ ಮಾಡಿ "ವೋಟ್ -ಜಿಹಾದ್" ಬಗ್ಗೆ ಕಿಡಿಕಾರಿದ್ದರು. ಈ ಜನರು ವೋಟ್ ಜಿಹಾದ್ ಮಾಡಲು ಪ್ರಯತ್ನಿಸುತ್ತಿದ್ದರೆ, ವೋಟ್ ಜಿಹಾದ್ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತೇವೆ ಎಂದು ಹೇಳುತ್ತಿದ್ದರೆ, ನೀವೂ ಮತಗಳ ಧರ್ಮಯುದ್ಧವನ್ನು ಮಾಡಬೇಕಾಗುತ್ತದೆ ಎಂದು ಫಡ್ನವೀಸ್ ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು.