ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ | ಆಂಧ್ರಪ್ರದೇಶದಲ್ಲಿ ಟೆಕ್ಕಿ ಬಂಧನ
ರಾಮೇಶ್ವರಂ ಕೆಫೆ
ಅನಂತಪುರ : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಪಟ್ಟಣದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರೋರ್ವರ ಪುತ್ರನನ್ನು ಮಂಗಳವಾರ ಬಂಧಿಸಲಾಗಿದ್ದು, ಇನ್ನೋರ್ವ ಪುತ್ರನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ತಿಳಿಸಿದೆ.
ಬಂಧಿತನನ್ನು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸೋಹೆಲ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಆತ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಬೆಳಗಿನ ಜಾವ ನಿವೃತ್ತ ಮುಖ್ಯೋಪಾಧ್ಯಾಯರ ಮನೆಗೆ ದಾಳಿ ನಡೆಸಿದ್ದ ಎನ್ಐಎ ತಂಡವು ಸೋಹೆಲ್ನನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಹಲವಾರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು.
ಸ್ಫೋಟದ ಹಿಂದಿನ ಉಗ್ರರೊಂದಿಗೆ ಸೋಹೆಲ್ ಹೊಂದಿದ್ದಾನೆ ಎನ್ನಲಾಗಿರುವ ನಂಟಿಗೆ ಸಂಬಂಧಿಸಿದ ಕೆಲವು ಆಕ್ಷೇಪಾರ್ಹ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸೋಹೆಲ್ನ ಸೋದರನ ಬ್ಯಾಂಕ್ ಖಾತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮತ್ತು ಶಂಕಾಸ್ಪದ ನಗದು ಮೊತ್ತ ಜಮೆಯಾದ ಬಳಿಕ ಎನ್ಐಎ ತಂಡವು ಆತನಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎನ್ನಲಾಗಿದೆ.