ರಾಮೇಶ್ವರಂ ಕೆಫೆ ಸ್ಫೋಟ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆ ಯಾಚಿಸಿದರೆ ಪ್ರಕರಣ ವಾಪಸ್ : ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದ ತಮಿಳುನಾಡು
ಶೋಭಾ ಕರಂದ್ಲಾಜೆ , ಮದ್ರಾಸ್ ಹೈಕೋರ್ಟ್ | PC : PTI
ಚೆನ್ನೈ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಿದ ಆರೋಪಿಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂಬ ಹೇಳಿಕೆಗಾಗಿ ಕೇಂದ್ರ ಸಹಾಯಕ ಕಾರ್ಮಿಕ ಮತ್ತು ಉದ್ಯೋಗ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಬುಧವಾರ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ ತಮಿಳುನಾಡು ಅಡ್ವೋಕೇಟ್ ಜನರಲ್ ಪಿ.ಎಸ್.ರಾಮನ್ ಅವರು, ಸಚಿವೆ ಸುದ್ದಿಗೋಷ್ಠಿಯನ್ನು ಕರೆದು ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಿದರೆ ಅವರ ವಿರುದ್ಧದ ಪ್ರಕರಣವನ್ನು ಹಿಂದೆಗೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾ.ಜಿ.ಜಯಚಂದ್ರನ್ ಅವರು, ಸಚಿವೆ ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಿದರೂ ಸರಕಾರವು ಅವರ ವಿರುದ್ಧದ ಕಾನೂನು ಕ್ರಮವನ್ನು ಮುಂದುವರಿಸಲಿದೆಯೇ ಎನ್ನುವುದನ್ನು ತಿಳಿದುಕೊಳ್ಳುವಂತೆ ರಾಮನ್ಗೆ ಸೂಚಿಸಿದ್ದರು.
ರಾಮನ್ ಸಚಿವೆಗಾಗಿ ತಾನು ಸಿದ್ಧಪಡಿಸಿದ ಕ್ಷಮೆಯಾಚನೆಯ ಕರಡನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದರು.
‘ಬೆಂಗಳೂರು ಬಾಂಬ್ ಸ್ಫೋಟ ಘಟನೆಯ ಕುರಿತು 2024 ,ಮಾ.19ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ ತಮಿಳುನಾಡು ಜನತೆಯ ಕುರಿತು ನನ್ನ ಹೇಳಿಕೆಗಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಅದು ಸೂಕ್ತವಾಗಿರಲಿಲ್ಲ ಮತ್ತು ಎಲ್ಲ ಸಂಸ್ಕೃತಿಗಳ ವೈವಿಧ್ಯ ಹಾಗೂ ಶ್ರೀಮಂತಿಕೆಗೆ ನನ್ನ ಗೌರವಕ್ಕೆ, ವಿಶೇಷವಾಗಿ ತಮಿಳುನಾಡು ಜನತೆಯ ವಿರುದ್ಧವಾಗಿತ್ತು ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ. ಇಂತಹ ಹೇಳಿಕೆಗಳ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ’ಎಂದು ಕ್ಷಮೆಯಾಚನೆ ಕರಡಿನಲ್ಲಿ ಹೇಳಲಾಗಿದೆ.
ಕರಡಿನ ಪ್ರತಿಯನ್ನು ಪಡೆದುಕೊಳ್ಳುವಂತೆ ಕರಂದ್ಲಾಜೆ ಪರ ವಕೀಲರಿಗೆ ಸೂಚಿಸಿದ ನ್ಯಾಯಾಧೀಶರು, ಕ್ಷಮೆ ಯಾಚಿಸಲು ಸಚಿವೆ ಒಪ್ಪುತ್ತಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಆ.16ರವರೆಗೆ ಕಾಲಾವಕಾಶವನ್ನು ನೀಡಿದರು.
ಕರಂದ್ಲಾಜೆ ಈಗಾಗಲೇ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ತನ್ನ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವಕೀಲರು ತಿಳಿಸಿದರಾದರೂ, ‘ನಾನೂ ಸೇರಿದಂತೆ ಎಷ್ಟೋ ಜನರು ಎಕ್ಸ್ನಲ್ಲಿ ಖಾತೆಯನ್ನು ಹೊಂದಿಲ್ಲ. ಹೀಗಾಗಿ ಅದು ಸಾಕಾಗುವುದಿಲ್ಲ. ಸುದ್ದಿಗೋಷ್ಠಿಯಲ್ಲಿ ಆರೋಪವನ್ನು ಮಾಡಿರುವುದರಿಂದ ಕ್ಷಮೆಯನ್ನೂ ಸುದ್ದಿಗೋಷ್ಠಿಯಲ್ಲಿಯೇ ಯಾಚಿಸಬೇಕು’ ಎಂದು ಹೇಳಿದರು.
ಕ್ಷಮೆಯಾಚನೆಗಾಗಿ ಸುದ್ದಿಗೋಷ್ಠಿಯನ್ನು ಕರೆಯುವ ಬದಲು ಕ್ಷಮೆಯನ್ನು ಕೋರಿ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ಕರಂದ್ಲಾಜೆಯವರಿಗೆ ಅನುಮತಿ ನೀಡಬಹುದಾಗಿದೆ ಎಂಬ ವಕೀಲರ ನಿವೇದನೆಯನ್ನೂ ತಿರಸ್ಕರಿಸಿದ ನ್ಯಾಯಾಧೀಶರು, ಅದು ರಾಜಕೀಯ ಪರಿಣಾಮಗಳನ್ನು ಹೊಂದಿರುವ, ಜೊತೆಗೆ ಜನರ ಭಾವನೆಗಳಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಆದ್ದರಿಂದ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಯಾಚಿಸುವುದು ಮಾತ್ರ ಸೂಕ್ತವಾಗುತ್ತದೆ ಎಂದು ಹೇಳಿದರು.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಬಂಧಿಸಿರುವ ಆರೋಪಿಗಳಲ್ಲಿ ಓರ್ವ ನಿಜಕ್ಕೂ ತಮಿಳುನಾಡಿಗೆ ಸೇರಿದವನಾಗಿದ್ದಾನೆ ಎಂದು ಕರಂದ್ಲಾಜೆ ಪರ ವಕೀಲರು ಹೇಳಿದಾಗ, ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ತಮಿಳುನಾಡು ಪೋಲಿಸರು ಒದಗಿಸಿದ್ದ ಮಾಹಿತಿಯ ಆಧಾರದಲ್ಲಿಯೇ ಎನ್ಐಎ ಆರೋಪಿಯನ್ನು ಬಂಧಿಸಿತ್ತು ಎಂದು ತಿಳಿಸಿದರು.
ಉನ್ನತ ಹುದ್ದೆಗಳಲ್ಲಿರುವವರು ಭಾವನೆಗಳನ್ನು ಕೆರಳಿಸುವ ಹೇಳಿಕೆಯನ್ನು ನೀಡಬಾರದು ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರು, ಸಚಿವೆ ಪ್ರಕರಣದ ಮುಂದಿನ ವಿಚಾರಣೆಗೆ ಮುನ್ನವೇ ಸುದ್ದಿಗೋಷ್ಠಿಯನ್ನು ಕರೆದು ಕ್ಷಮೆ ಯಾಚಿಸಬಹುದು ಮತ್ತು ನ್ಯಾಯಾಲಯಕ್ಕೆ ವರದಿ ಮಾಡಬಹುದು ಎಂದರು.