ರಾಮಮೋಹನ ನಾಯ್ಡು ಕಿಂಜರಾಪು: ಅತ್ಯಂತ ಕಿರಿಯ ಕೇಂದ್ರ ಸಚಿವ
ರಾಮಮೋಹನ ನಾಯ್ಡು | PC : PTI
ಹೊಸದಿಲ್ಲಿ: ರವಿವಾರ ಮೋದಿ 3.0 ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆಂಧ್ರಪ್ರದೇಶದ ಶ್ರೀಕಾಕುಳಂ ಲೋಕಸಭಾ ಕ್ಷೇತ್ರದ ಟಿಡಿಪಿ ಸಂಸದ ರಾಮಮೋಹನ ನಾಯ್ಡು ಕಿಂಜರಾಪು (36) ಭಾರತದ ಈವರೆಗಿನ ಅತ್ಯಂತ ಕಿರಿಯ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾಯ್ಡು ತನ್ನ ತಂದೆ,ಮಾಜಿ ಕೇಂದ್ರ ಸಚಿವ ಹಾಗೂ ಟಿಡಿಪಿ ನಾಯಕ ಕೆ.ಯೆರ್ರನ್ ನಾಯ್ಡು ಅವರ ಹೆಜ್ಜೆಗಳಲ್ಲೇ ಸಾಗಿದ್ದಾರೆ. 1996ರಲ್ಲಿ ತನ್ನ 39ನೇ ವಯಸ್ಸಿನಲ್ಲಿ ಕೇಂದ್ರದ ಅತ್ಯಂತ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಯೆರ್ರನ್ ನಾಯ್ಡು 1996ರಿಂದ 1998ರವರೆಗೆ ಎಚ್.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಅವರ ಸಂಯುಕ್ತ ರಂಗ ಸರಕಾರಗಳಲ್ಲಿ ಸಚಿವರಾಗಿದ್ದರು.
ಎಂಬಿಎ ಮಾಡಿರುವ ನಾಯ್ಡು ಅಮೆರಿಕದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. 2012ರಲ್ಲಿ ಯೆರ್ರನ್ ನಾಯ್ಡು ರಸ್ತೆ ಅಪಘಾತದಲ್ಲಿ ನಿಧನರಾದ ಬಳಿಕ ರಾಜಕೀಯವನ್ನು ಪ್ರವೇಶಿಸಿದ್ದ ನಾಯ್ಡು ಶ್ರೀಕಾಕುಳಂ ಲೋಕಸಭಾ ಕ್ಷೇತ್ರದಿಂದ ಈಗ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.
2014ರಲ್ಲಿ ತನ್ನ 26ರ ಹರೆಯದಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ್ದ ನಾಯ್ಡು 16ನೇ ಲೋಕಸಭೆಯಲ್ಲಿ ಎರಡನೇ ಅತ್ಯಂತ ಕಿರಿಯ ಸಂಸದನಾಗಿದ್ದರು.