ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ 25 ಹುಲಿಗಳು ನಾಪತ್ತೆ!
ಸಾಂದರ್ಭಿಕ ಚಿತ್ರ | PC : PTI
ಜೈಪುರ: ರಣಥಂಬೋರ್ ರಾಷ್ಟ್ರೀಯ ಉದ್ಯಾನವನ (ಆರ್ಎನ್ಪಿ)ದಲ್ಲಿ ಕಳೆದ ವರ್ಷದಿಂದ 75ರಲ್ಲಿ 25 ಹುಲಿಗಳು ನಾಪತ್ತೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ಅವರು ಉದ್ಯಾನವನದ ಅಧಿಕಾರಿಗಳಿಗೆ ಸೋಮವಾರ ತಿಳಿಸಿದ್ದಾರೆ.
ಒಂದು ವರ್ಷದಲ್ಲಿ ಈ ರೀತಿ ಅತ್ಯಧಿಕ ಸಂಖ್ಯೆಯ ಹುಲಿಗಳು ನಾಪತ್ತೆ ಅಧಿಕೃತವಾಗಿ ವರದಿಯಾಗುತ್ತಿರುವುದು ಇದೇ ಮೊದಲು. ಈ ಹಿಂದೆ 2019 ಜನವರಿ ಹಾಗೂ 2022 ಜನವರಿ ನಡುವೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ 13 ಹುಲಿಗಳು ನಾಪತ್ತೆಯಾಗಿರುವುದು ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಹುಲಿಗಳ ಕಣ್ಮರೆಯ ಬಗ್ಗೆ ತನಿಖೆ ನಡೆಸಲು ವನ್ಯ ಜೀವಿ ಇಲಾಖೆ ಸೋಮವಾರ ಮೂವರು ಸದಸ್ಯರ ಸಮಿತಿಯನ್ನು ರೂಪಿಸಿದೆ. ಈ ಸಮಿತಿ ಮೇಲ್ವಿಚಾರಣೆ ದಾಖಲೆಗಳ ಪರಿಶೀಲನೆ ನಡೆಸಲಿದೆ ಹಾಗೂ ಉದ್ಯಾನವನದ ಅಧಿಕಾರಿಗಳಿಂದ ಯಾವುದೇ ಕರ್ತವ್ಯಲೋಪ ಸಂಭವಿಸಿದರೆ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಮೇ 17 ಹಾಗೂ ಸೆಪ್ಟಂಬರ್ 30ರ ನಡುವೆ ಕಣ್ಮರೆಯಾಗಿರುವ 14 ಹುಲಿಗಳನ್ನು ಪತ್ತೆ ಹಚ್ಚಲು ಈ ಸಮಿತಿ ಗಮನ ಕೇಂದ್ರೀಕರಿಸಲಿದೆ. ನವೆಂಬರ್ 4ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ ಹುಲಿಗಳು ನಾಪತ್ತೆಯಾದ ವರದಿಗಳು ರಣಥಂಬೋರ್ ಮೇಲ್ವಿಚಾರಣೆ ಮೌಲ್ಯಮಾಪನಗಳಲ್ಲಿ ಮತ್ತೆ ಮತ್ತೆ ಕಂಡು ಬಂದಿವೆ.
ಉದ್ಯಾನವನದ ಕ್ಷೇತ್ರ ನಿರ್ದೇಶಕರಿಗೆ ಹಲವು ನೋಟಿಸುಗಳನ್ನು ರವಾನಿಸಿದ ಹೊರತಾಗಿಯೂ ಯಾವುದೇ ಗಣನೀಯ ಸುಧಾರಣೆ ಕಂಡು ಬಂದಿಲ್ಲ. 2024 ಅಕ್ಟೋಬರ್ 14ರ ವರದಿಯಂತೆ ಒಂದು ವರ್ಷದ ಅವಧಿಯಲ್ಲಿ 11 ಹುಲಿಗಳು ನಾಪತ್ತೆಯಾಗಿವೆ. ಇನ್ನೂ 14 ಹುಲಿಗಳು ಇತ್ತೀಚೆಗೆ ಕಾಣಿಸಿಕೊಂಡಿಲ್ಲ.
ಇದೆಲ್ಲವನ್ನೂ ಗಮನಿಸಿ ರಣಥಂಬೋರ್ನಲ್ಲಿ ನಾಪತ್ತೆಯಾಗಿರುವ ಹುಲಿಗಳ ತನಿಖೆಗೆ ವಿಚಾರಣಾ ಸಮಿತಿಯನ್ನು ರೂಪಿಸಲಾಗಿದೆ ಎಂದು ಆದೇಶ ಹೇಳಿದೆ. ಈ ಸಮಿತಿ ತನ್ನ ವರದಿಯನ್ನು ಎರಡು ತಿಂಗಳ ಒಳಗೆ ಸಲ್ಲಿಸಲಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.