ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಹೇಳಿಕೆ ವಿವಾದ : ಸಂಸದೀಯ ಸಮಿತಿ ನೋಟಿಸ್ ನೀಡುವ ಸಾಧ್ಯತೆ

Photo credit: livemint.com
ಹೊಸದಿಲ್ಲಿ: ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಅವರಿಗೆ ಮಾಹಿತಿ ತಂತ್ರಜ್ಞಾನ(ಐಟಿ) ಕುರಿತ ಸಂಸದೀಯ ಸಮಿತಿಯು ನೋಟಿಸ್ ನೀಡುವ ಸಾಧ್ಯತೆ ಇದೆ.
ಯೂಟ್ಯೂಬ್ ಶೋ ʼಇಂಡಿಯಾಸ್ ಗಾಟ್ ಲೇಟೆಂಟ್ʼನಲ್ಲಿನ ಹೇಳಿಕೆಗಾಗಿ ರಣವೀರ್ ಮತ್ತು ಕಾಮೆಡಿಯನ್ ಸಮಯ್ ರೈನಾ ವಿರುದ್ಧ ಮುಂಬೈನಲ್ಲಿ ದೂರು ದಾಖಲು ಮತ್ತು ಸಂಸದರಿಂದ ದೂರಿನ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.
ಅಶ್ಲೀಲ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಂಸದೀಯ ಸಮಿತಿಯು ರಣವೀರ್ ಅವರಿಗೆ ನೋಟಿಸ್ ಕಳುಹಿಸಲು ಮುಂದಾಗಿದೆ. ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕಾಗಿ ಯೂಟ್ಯೂಬ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಅಲಹಾಬಾದಿಯ ಅವರ ಹೇಳಿಕೆಗಳ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯರಾದ ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಮತ್ತು ಶಿವಸೇನಾ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ʼಇದು ಅತ್ಯಂತ ದುರದೃಷ್ಟಕರ, ನಾನು ಈ ಬಗ್ಗೆ ಕಟ್ಟುನಿಟ್ಟಾದ ಕ್ರಮವನ್ನು ಬಯಸುತ್ತೇನೆ, ಇಂತಹ ಅವಹೇಳನಾಕಾರಿ ಟೀಕೆಗಳನ್ನು ತುಂಬಾ ಸಲೀಸಾಗಿ ಬಳಸಲಾಗುತ್ತದೆ, ಕೆಲ ಯುವ ತಲೆಮರಗಳು ಇಂತಹ ಯೂಟ್ಯೂಬರ್ ಗಳನ್ನು ಅನುಸರಿಸುತ್ತಾರೆʼ ಎಂದು ಬಿಜೆಡಿ ಸಂಸದ ಸಸ್ಮಿತ್ ಪಾತ್ರಾ ಹೇಳಿದರು.
ʼಹಾಸ್ಯದ ಹೆಸರಿನಲ್ಲಿ ಇಂತಹ ನಿಂದನೀಯ ಭಾಷೆ ಬಳಕೆ ಸ್ವೀಕಾರಾರ್ಹವಲ್ಲ. ಅವರು ಲಕ್ಷಾಂತರ ಚಂದಾದಾರರನ್ನು ಹೊಂದಿರುವವರು. ಅವರ ಪಾಡ್ಕ್ಯಾಸ್ಟ್ ಸಂದರ್ಶನದಲ್ಲಿ ಹಲವಾರು ರಾಜಕಾರಣಿಗಳು ಭಾಗವಹಿಸಿದ್ದರು. ಪ್ರಧಾನಿ ರಣವೀರ್ ಗೆ ಪ್ರಶಸ್ತಿ ನೀಡಿದ್ದರುʼ ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದರು.