9 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ | ಪಶ್ಚಿಮ ಬಂಗಾಳದ ಪೊಲೀಸ್ ಔಟ್ಪೋಸ್ಟ್ಗೆ ಗ್ರಾಮಸ್ಥರಿಂದ ಬೆಂಕಿ
PC : PTI
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಘಟನೆಯಿಂದ ಉದ್ರಿಕ್ತ ಗ್ರಾಮಸ್ಥರು ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ ಪೊಲೀಸ್ ಔಟ್ಪೋಸ್ಟ್ಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಕುಟುಂಬ ಮತ್ತು ನೆರೆಹೊರೆಯವರ ಪ್ರಕಾರ, ಶುಕ್ರವಾರ ಮಧ್ಯಾಹ್ನ ಬಾಲಕಿಯು ಕೋಚಿಂಗ್ ಸೆಂಟರ್ಗೆ ಹೋಗಿದ್ದಳು. ಆಕೆ ಮನೆಗೆ ಹಿಂದಿರುಗದಿದ್ದಾಗ ಕುಟುಂಬದವರು ಆಕೆಗಾಗಿ ಹುಡುಕಾಟ ಪ್ರಾರಂಭಿಸಿದರು. ಆಕೆಯನ್ನು ಪತ್ತೆ ಮಾಡಲು ವಿಫಲರಾದಾಗ, ಅವರು ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದರು. ಆದರೆ ಸ್ಥಳೀಯ ಪೊಲೀಸರು ಮತ್ತೊಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶುಕ್ರವಾರ ರಾತ್ರಿ ಬಾಲಕಿಯ ಶವ ಸಮೀಪದ ಕೊಳದಲ್ಲಿ ಪತ್ತೆಯಾದಾಗ, ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಯಿತು.
ಶನಿವಾರ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಯ ಸುತ್ತಲೂ ಪೊರಕೆ, ದೊಣ್ಣೆ, ಬಿದಿರು ಹಿಡಿದು ಆಕ್ರೋಶಗೊಂಡ ಜನ ಜಮಾಯಿಸಿದರು. ಉಪವಿಭಾಗದ ಪೊಲೀಸ್ ಅಧಿಕಾರಿ ಅತಿಶ್ ಬಿಸ್ವಾಸ್ ಅವರಿಗೆ ಘೇರಾವ್ ಹಾಕಿದರು. ಗ್ರಾಮಸ್ಥರು ಪೊಲೀಸ್ ಔಟ್ಪೋಸ್ಟ್ ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಇದರ ಪರಿಣಾಮವಾಗಿ ಹಲವಾರು ಪ್ರಮುಖ ದಾಖಲೆಗಳು ನಾಶವಾದವು. ಅಂತಿಮವಾಗಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎನ್ನಲಾಗಿದೆ.
“ಇಲ್ಲಿಯವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನು ಯಾರಾದ್ರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಈ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಅದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ನಿರ್ಲಕ್ಷ್ಯ ಮತ್ತು ಅಸಮರ್ಥತೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನೂ ಕೂಡ ತಪ್ಪೊಪ್ಪಿಕೊಂಡಿದ್ದಾನೆ" ಎಂದು ಅವರು ಹೇಳಿದರು.
ಈ ಘಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ. ದುರ್ಗೆ ಪೂಜೆ ಮಾಡುವ ಸಮಯದಲ್ಲಿ, ನಮ್ಮ ಮಗಳನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗುತ್ತಿದೆ. ಮನೆಯಲ್ಲಿ ನಮ್ಮ ದುರ್ಗೆ ಸುರಕ್ಷಿತವಾಗಿಲ್ಲದಿದ್ದರೆ ನಾವು ಯಾವ ದುರ್ಗೆಯನ್ನು ಪೂಜಿಸಬೇಕು? ಇದಕ್ಕೆಲ್ಲಾ ಮಮತಾ ಬ್ಯಾನರ್ಜಿ ಕಾರಣ. ಪೊಲೀಸರು ಸುಲಭವಾಗಿ ಎಫ್ಐಆರ್ ದಾಖಲಿಸಬಾರದು ಎಂಬ ಸಂದೇಶವನ್ನು ಅವರು ಹೇಳಿದ್ದಾರೆ ಎಂದು ಬಿಜೆಪಿ ನಾಯಕ ಸುಕಾಂತೋ ಮಜುಂದಾರ್ ಹೇಳಿದ್ದಾರೆ.
“ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದವರಿಗೆ ಅಷ್ಟಮಿಯಂದು ದುರ್ಗೆಯ ಪೂಜೆ ಮಾಡುವ ಹಕ್ಕಿದೆಯೇ? ಸಮಾಜವಾಗಿ ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಸಿಪಿಐಎಂ ನಾಯಕ ತನ್ಮಯ್ ಭಟ್ಟಾಚಾರ್ಜಿ ಪ್ರಶ್ನಿಸಿದ್ದಾರೆ.