ವೈದ್ಯೆಯ ಅತ್ಯಾಚಾರ-ಹತ್ಯೆ | ಕೋಲ್ಕತಾದಲ್ಲಿ ಮಾನವ ಹಕ್ಕು ಕಾರ್ಯಕರ್ತರು, ಚಿತ್ರರಂಗದ ಗಣ್ಯರಿಂದ ಅಹೋರಾತ್ರಿ ಧರಣಿ
PC : PTI
ಕೋಲ್ಕತಾ : ಕಳೆದ ತಿಂಗಳು ಇಲ್ಲಿಯ ಆರ್ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಕಿರಿಯ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಮಾನವ ಹಕ್ಕು ಕಾರ್ಯಕರ್ತರು ಮತ್ತು ಚಿತ್ರರಂಗದ ಗಣ್ಯರು ಸೋಮವಾರ ನಸುಕಿನ ನಾಲ್ಕು ಗಂಟೆಯವರೆಗೆ ಅಹೋರಾತ್ರಿ ಧರಣಿಯನ್ನು ನಡೆಸಿದರು.
ರವಿವಾರ ನಡೆದ ಪ್ರತಿಭಟನಾ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಘೋರ ಅಪರಾಧದ ತ್ವರಿತ ತನಿಖೆ ಮತ್ತು ಅಪರಾಧಿಗಳ ಬಂಧನಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನಾಕಾರರು ರ್ಯಾಲಿಯ ಅಂತ್ಯದಲ್ಲಿ ಮಧ್ಯ ಕೋಲ್ಕತಾದ ಎಸ್ಪ್ಲನೇಡ್ ಪ್ರದೇಶದಲ್ಲಿ ಧರಣಿ ಆರಂಭಿಸಿದ್ದರು.
ರವಿವಾರ ರಾತ್ರಿಯ ಪ್ರತಿಭಟನೆಯು ಹತ ಕಿರಿಯ ವೈದ್ಯೆಗೆ ನ್ಯಾಯಕ್ಕಾಗಿ ಆಗ್ರಹಿಸಿ ಆ.14ರಂದು ಮಧ್ಯರಾತ್ರಿ ನಡೆದಿದ್ದ ‘ವಿಮೆನ್ ರಿಕ್ಲೇಮ್ ದಿ ನೈಟ್’ ಕಾರ್ಯಕ್ರಮವನ್ನು ನೆನಪಿಸಿತ್ತು.
‘ನಮ್ಮ ಬೇಡಿಕೆಯನ್ನು ಈಡೇರಿಸಲು ನಾವು ಆಡಳಿತಕ್ಕೆ ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಗಡುವು ನೀಡಿದ್ದೆವು. ಆದರೆ ಪೋಲಿಸ್,ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸರಕಾರದ ಯಾವುದೇ ಇಲಾಖೆಯು ನಮ್ಮೊಂದಿಗೆ ಸಂವಹನ ನಡೆಸಿಲ್ಲ. ಧರಣಿಯ ಆರಂಭದಲ್ಲಿ ನಮ್ಮ ದೂರುಗಳನ್ನು ಆಲಿಸಲು ಪ್ರತಿನಿಧಿಗಳನ್ನು ಕಳುಹಿಸುವಂತೆ ಆಗ್ರಹಿಸಿ ನಾವು ಈ ಇಲಾಖೆಗಳಿಗೆ ಪ್ರತ್ಯೇಕ ಮೇಲ್ಗಳನ್ನು ರವಾನಿಸಿದ್ದೆವು. ಆದರೆ ಸರಕಾರದ ಯಾವುದೇ ಪ್ರತಿನಿಧಿ ಪ್ರತಿಕ್ರಿಯಿಸಲಿಲ್ಲ,ಸ್ಥಳಕ್ಕೆ ಬಂದಿರಲೂ ಇಲ್ಲ ’ ಎಂದು ಚಿತ್ರ ನಿರ್ದೇಶಕ ದಾಸಗುಪ್ತಾ ತಿಳಿಸಿದರು.
‘ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದವರು ಆಂದೋಲನವನ್ನು ಹೇಗೆ ಮುಂದುವರಿಸಬೇಕು ಎಂಬ ಕುರಿತು ಚರ್ಚಿಸಲಿದ್ದಾರೆ. ಧರಣಿಗಾಗಿ ನಿರ್ಮಿಸಿದ್ದ ವೇದಿಕೆಯನ್ನು ನಾವು ತೆಗೆಯುವುದಿಲ್ಲ’ಎಂದು ನಟಿ ಸೋಹಿನಿ ಸರ್ಕಾರ್ ಹೇಳಿದರು.
ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ನಟಿ ಸ್ವಸ್ತಿಕಾ ಮುಖರ್ಜಿ ‘ಶೋಷಣೆಯಿಂದ ಆಜಾದಿ’ ಮತ್ತು ತಪ್ಪಿತಸ್ಥ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದರು.