ಜೀವ ಪಣಕ್ಕಿಟ್ಟು ಸುರಂಗ ಕೊರೆದ ಹಸನ್, ಖುರೇಷಿ ನೇತೃತ್ವದ ತಂಡದ ಸಾಹಸಕ್ಕೆ ಜನ ಫಿದಾ
17 ದಿನಗಳ ಬಳಿಕ 41 ಕಾರ್ಮಿಕರ ರಕ್ಷಣೆ
Photo: PTI
ಹೊಸದಿಲ್ಲಿ: ಕಳೆದ 17 ದಿನಗಳಿಂದ ಸುರಂಗದಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ಕೊನೆಗೂ ಯಶಸ್ವಿಯಾಗಿ ಹೊರ ತರಲಾಗಿದೆ.
ಬೃಹತ್ ಯಂತ್ರಗಳು ಕೈಕೊಟ್ಟಾಗ ಮಾನವ ಶಕ್ತಿಯನ್ನು ಬಳಸಿ ಮಣ್ಣು ಕೊರೆದು ಕಾರ್ಮಿಕರನ್ನು ರಕ್ಷಿಸಲಾಗಿದೆ. ಕಾರ್ಮಿಕರ ರಕ್ಷಣೆಗೆ ದೆಹಲಿಯ ಗಣಿ ಕೊರೆಯುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನುರಿತ ಕೆಲಸಗಾರರನ್ನು ಕರೆ ತರಲಾಗಿದ್ದು, ನಿರಂತರ ಕಾರ್ಯಾಚರಣೆಯಿಂದ ಕಾರ್ಮಿಕರನ್ನು ಹೊರ ತಂದ ಈ ಕೆಲಸಗಾರರಿಗೆ ವ್ಯಾಪಕ ಮೆಚ್ಚುಗೆಗಳು ಹರಿದು ಬಂದಿವೆ.
ಕಾರ್ಮಿಕರ ರಕ್ಷಣೆಗೆ ಬಂದವರಲ್ಲಿ ಮುನ್ನಾ ಖುರೇಷಿ ಕೂಡಾ ಒಬ್ಬರು. ಮಂಗಳವಾರ ಸಂಜೆ 7.05 ರ ಸುಮಾರಿಗೆ ಹೊರ ಬಂದ ಸುರಂಗ ಕಾಮಗಾರಿಯ ಮೊದಲ ಕಾರ್ಮಿಕನನ್ನು ಸ್ವಾಗತಿಸಿದ್ದು ಕೂಡಾ ಇವರೇ.
ಫಿರೋಝ್, ರಶೀದ್, ಇರ್ಶಾದ್, ನಸೀಮ್, ಮೋನು, ನಾಸೀರ್, ಅಂಕುರ್, ಜತಿನ್, ಸೌರಭ್, ವಕೀಲ್ ಹಸನ್ ಮತ್ತು ದೇವೇಂದರ್ ಈ ತಂಡದಲ್ಲಿ ಇದ್ದ ಇತರೆ ಗಣಿಗಾರರು. ರ್ಯಾಟ್ ಹೋಲ್ ಮೈನರ್ ಅಥವಾ ಇಲಿ ರಂಧ್ರ ಗಣಿಗಾರರು ಎಂದು ಕರೆಯಲ್ಪಡುವ ಇವರ ಕಾರ್ಯಕ್ಕೆ ನೆಟ್ಟಿಗರಿಂದ ಭರಪೂರ ಪ್ರಶಂಸೆಗಳು ವ್ಯಕ್ತವಾಗಿದ್ದು, ನಿಜವಾದ ಹೀರೋಗಳು ಎಂದು ನೆಟ್ಟಿಗರು ಕರೆದಿದ್ದಾರೆ.
ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದರು. ಅಗರ್ ಯಂತ್ರದಲ್ಲಿ ದೋಷ ಕಂಡ ಬಳಿಕ ಕೈಯ್ಯಲ್ಲಿ ಹಿಡಿಯುವ ಯಂತ್ರಗಳಿಂದಲೇ ಕೊರೆಯುವ ಕಾರ್ಯವನ್ನು ನಡೆಸಲಾಯಿತು.
41 ಕಾರ್ಮಿಕರನ್ನು ರಕ್ಷಿಸುವ ಭಾರತೀಯ ಸೇನಾ ಕಾರ್ಯಾಚರಣೆಗೆ ಉತ್ತರ ಪ್ರದೇಶದ ಝಾನ್ಸಿಯ ಆರು ಮಂದಿ 'ರ್ಯಾಟ್ ಹೋಲ್' ಗಣಿ ಕುಶಲಕಾರ್ಮಿಕರ ತಂಡ ಕೈಜೋಡಿಸಿತ್ತು.
ನ. 12ರಂದು ಸುರಂಗದ ಒಂದು ಭಾಗ ಕುಸಿದಿದ್ದರಿಂದ 41 ಕಾರ್ಮಿಕರು ಒಳಗಡೆ ಸಿಲುಕಿದ್ದರು.