ಅಡುಗೆ ಕೋಣೆಯಲ್ಲಿ ಇಲಿ, ಜಿರಳೆಗಳು ಪತ್ತೆ: ಮುಂಬೈಯ ಜನಪ್ರಿಯ ‘ಬಡೇಮಿಯಾ’ ರೆಸ್ಟೋರೆಂಟ್ ಬಾಗಿಲು ಮುಚ್ಚಿಸಿದ ಎಫ್ಡಿಎ
Photo:indiatoday.in
ಮುಂಬೈ: ಬುಧವಾರ ಜನಪ್ರಿಯ ದಕ್ಷಿಣ ಮುಂಬೈ ರೆಸ್ಟೋರೆಂಟ್ ‘ಬಡೇಮಿಯಾ’ದ ಮೇಲೆ ಆಹಾರ ಮತ್ತು ಔಷಧ ಆಡಳಿತವು (FDA) ಅಧಿಕಾರಿಗಳು ದಾಳಿ ನಡೆಸಿದಾಗ ಅಡುಗೆ ಕೋಣೆಯಲ್ಲಿ ಜಿರಳೆಗಳು ಹಾಗೂ ಇಲಿಗಳು ಪತ್ತೆಯಾಗಿದ್ದರಿಂದ ರೆಸ್ಟೋರೆಂಟ್ ಬಾಗಿಲನ್ನು ಮುಚ್ಚಿಸಲಾಗಿದೆ ಎಂದು news18.com ವರದಿ ಮಾಡಿದೆ.
ಶುಚಿತ್ವ ಕುರಿತಂತೆ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಅಧಿಕಾರಿಗಳು ಉಪಾಹಾರ ಗೃಹದ ಮೇಲೆ ದಾಳಿ ನಡೆಸಿದೆ. India Today ವರದಿಯ ಪ್ರಕಾರ, ಬಡೇಮಿಯಾ ಉಪಾಹಾರ ಗೃಹದ ದಾಖಲೆಗಳನ್ನು ಆಹಾರ ಮತ್ತು ಔಷಧ ಆಡಳಿತದ ಅಧಿಕಾರಿಗಳು ಆಳವಾಗಿ ಪರಿಶೀಲನೆ ನಡೆಸಿದಾಗ, ಅದು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾಪಕಗಳ ಪ್ರಾಧಿಕಾರದ ಪರವಾನಗಿ ಪಡೆಯದಿರುವುದು ಪತ್ತೆಯಾಗಿದೆ.
ಈ ಉಪಾಹಾರ ಗೃಹವು 76 ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗಿದೆ. ಈ ಕೆಬಾಬ್ ಮಳಿಗೆಯು ದಕ್ಷಿಣ ಮುಂಬೈನಲ್ಲಿ ಒಂದು ಶಾಖೆ ಹಾಗೂ ಬಾಂದ್ರಾದಲ್ಲಿ ಒಂದು ಶಾಖೆಯನ್ನು ಪರವಾನಗಿ ರಹಿತವಾಗಿ ನಡೆಸುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪಾಹಾರ ಗೃಹದ ಮಾಲಕರು, FSSAI ಪರವಾನಗಿಯನ್ನು ಹೊರತುಪಡಿಸಿ ಉಳಿದೆಲ್ಲ ಪರವಾನಗಿಗಳು ನಮ್ಮ ಬಳಿ ಇದ್ದು, ಈ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಪ್ರಾಧಿಕಾರಗಳ ನಿಬಂಧನೆಗಳನ್ನು ಪೂರ್ಣಪ್ರಮಾಣದಲ್ಲಿ ಅನುಸರಿಸಲು ನಾವು ಸಿದ್ಧವಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.