ರಾಹುಲ್ ಗಾಂಧಿ ವಿರುದ್ಧ ನೀಡಿದ ಹೇಳಿಕೆಗೆ ನಾನು ಬದ್ಧ : ಸಚಿವ ರವನೀತ್ ಸಿಂಗ್ ಬಿಟ್ಟು
ರವನೀತ್ ಸಿಂಗ್ ಬಿಟ್ಟು | PC : PTI
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ನಿಂದ ಒಂದಿನಿತೂ ಅಳುಕದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಹಾಗೂ ಪೊಲೀಸ್ ದೂರುಗಳಿಗೆ ಹೆದರುವುದಿಲ್ಲ ಎಂದು ಗುರುವಾರ ಪುನರುಚ್ಚರಿಸಿದ್ದಾರೆ.
ಭಾರತದಲ್ಲಿನ ಸಿಖ್ಖರ ಕುರಿತು ಅಮೆರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಕೇಂದ್ರ ಸಚಿವ ರವನೀತ್ ಸಿಂಗ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಯೊಬ್ಬರ ದೂರನ್ನು ಆಧರಿಸಿ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.
ಹಾಲಿ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, “ಕಾಂಗ್ರೆಸ್ ಪಕ್ಷವು ಎಫ್ಐಆರ್ ಮತ್ತು ಪ್ರಕರಣಗಳನ್ನು ದಾಖಲಿಸುವ ಮೂಲಕ ಯಾವಾಗಲೂ ಬೆದರಿಸಲು ಯತ್ನಿಸುತ್ತದೆ. ನನಗೆ ಈ ಬಗ್ಗೆ ಯಾವುದೇ ಅಳುಕಿಲ್ಲ. ಭಾರತದಲ್ಲಿನ ಸಿಖ್ಖರ ಪರಿಸ್ಥಿತಿ ಕುರಿತು ರಾಹುಲ್ ಗಾಂಧಿ ಏನೆಲ್ಲ ಹೇಳಿಕೆ ನೀಡಿದ್ದಾರೊ, ಆ ದೃಷ್ಟಿಕೋನವನ್ನು ನಾನು ಹೇಗೆ ಅನುಮೋದಿಸಲಿ?” ಎಂದು ಪ್ರಶ್ನಿಸಿದ್ದಾರೆ.