ಸಾಲ ಲಭ್ಯತೆ ಹೆಚ್ಚಿಸಿದ ಆರ್ಬಿಐ: ಯುಪಿಐ ಆಧಾರಿತ ಕ್ರೆಡಿಟ್ ಲೈನ್ಗಳಿಗೆ ʼಸ್ಮಾಲ್ ಫೈನಾನ್ಸ್ ಬ್ಯಾಂಕ್ʼಗಳಿಗೆ ಅವಕಾಶ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಆರ್ಬಿಐ ಈಗ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ಗಳನ್ನು ಗ್ರಾಹಕರು ಯುಪಿಐ ಮೂಲಕ ಪಡೆದುಕೊಳ್ಳುವ ಅವಕಾಶವನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಎಸ್ಎಫ್ಬಿ)ಗಳಿಗೂ ವಿಸ್ತರಿಸಿದೆ. ಈ ಕ್ರಮವು ಡಿಜಿಟಲ್ ಕೊಡುಗೆಗಳ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯುಪಿಐ ಆಧಾರಿತ ಕ್ರೆಡಿಟ್ ಲೈನ್ ಹೊಸ ಗ್ರಾಹಕರಿಗೆ ಅಲ್ಪಾವಧಿ ಸಾಲಗಳನ್ನು ಪಡೆಯುವ ಸೌಲಭ್ಯವನ್ನು ಒದಗಿಸಲಿದೆ. ಎಸ್ಎಫ್ಬಿಗಳು ತಳಮಟ್ಟದ ಗ್ರಾಹಕರನ್ನು ತಲುಪಲು ಹೆಚ್ಚು ತಂತ್ರಜ್ಞಾನ ಮತ್ತು ಕಡಿಮೆ ವೆಚ್ಚದ ಮಾದರಿಯನ್ನು ಬಳಸಿಕೊಳ್ಳುತ್ತವೆ ಮತ್ತು ಇದು ಯುಪಿಐ ಮೂಲಕ ಸಾಲ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು ಎಂದು ಆರ್ಬಿಐ ಹೇಳಿದೆ.
ಸೆಪ್ಟೆಂಬರ್ 2023ರಲ್ಲಿ ಪೂರ್ವ ಮಂಜೂರು ಕ್ರೆಡಿಟ್ ಲೈನ್ಗಳನ್ನು ಯುಪಿಐ ಮೂಲಕ ಲಿಂಕ್ ಮಾಡಲು ಮತ್ತು ಪೇಮೆಂಟ್ ಬ್ಯಾಂಕ್ಗಳು,ಎಸ್ಎಫ್ಬಿಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ ವಾಣಿಜ್ಯ ಬ್ಯಾಂಕ್ಗಳು ನಿಧಿ ಖಾತೆಯನ್ನಾಗಿ ಬಳಸಿಕೊಳ್ಳುವುದನ್ನು ಸಾಧ್ಯವಾಗಿಸುವ ಮೂಲಕ ಯುಪಿಐ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು.
ಆರ್ಬಿಐ ಗ್ರಾಹಕರ ಹಿತಾಸಕ್ತಿಗಳಿಗೆ ಗಮನ ನೀಡುವುದನ್ನು ಮುಂದುವರಿಸಿದೆ. ಯುಪಿಐ ಆಧಾರಿತ ಕ್ರೆಡಿಟ್ ಲೈನ್ಗಳನ್ನು ಎಸ್ಎಫ್ಬಿಗಳಿಗೆ ವಿಸ್ತರಿಸಿರುವುದು ಉತ್ತಮ ಪೈಪೋಟಿ ಮಾತ್ರವಲ್ಲ, ಉತ್ತಮ ಆರ್ಥಿಕ ಸೇರ್ಪಡೆಯನ್ನೂ ಖಚಿತ ಪಡಿಸುವ ಸರಿಯಾದ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಗ್ರ್ಯಾಂಟ್ ಥಾರ್ನಟನ್ ಭಾರತ್ನ ಪಾಲುದಾರ ವಿವೇಕ ಅಯ್ಯರ್ ಹೇಳಿದರು.