ಪೇಟಿಎಂನ ಠೇವಣಿ ಸ್ವೀಕರಿಸುವ ಗಡುವನ್ನು ಮಾ. 15ರವರೆಗೆ ವಿಸ್ತರಿಸಿದ ಆರ್ ಬಿ ಐ
ಮುಂಬೈ: ತನ್ನ ಗ್ರಾಹಕರ ಖಾತೆಗಳು, ವ್ಯಾಲೆಟ್ ಗಳು ಅಥವಾ ಮುಂಚಿತ ಪಾವತಿಯ ಯೋಜನೆಗಳಲ್ಲಿ ಹೊಸ ಠೇವಣಿಗಳು ಅಥವಾ ಟಾಪ್-ಅಪ್ ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ಪೇಟಎಂ ಗೆ ನೀಡಿರುವ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಶುಕ್ರವಾರ ಮಾರ್ಚ್ 15ರವರೆಗೆ ವಿಸ್ತರಿಸಿದೆ. ಮೊದಲಿನ ಗಡುವು ಫೆಬ್ರವರಿ 29 ಆಗಿತ್ತು.
ವ್ಯಾಪಾರಿಗಳು ಸೇರಿದಂತೆ ಪೇಟಿಎಮ್ ಪೇಮೆಂಟ್ಸ್ ಬ್ಯಾಂಕಿನ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಆರ್ ಬಿ ಐ ಹೇಳಿದೆ. ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅದರ ಗ್ರಾಹಕರಿಗೆ ಹೆಚ್ಚು ಸಮಯಾವಕಾಶ ಬೇಕಾಗಬಹುದು ಎಂ ಭಾವಿಸಿ ಗಡುವು ವಿಸ್ತರಿಸಲಾಗಿದೆ ಎಂದು ಆರ್ ಬಿ ಐ ಹೇಳಿದೆ.
ಮಾರ್ಚ್ 15ರ ನಂತರವೂ, ತಮ್ಮ ಖಾತೆಗಳಲ್ಲಿ ಉಳಿದಿರುವ ಮೊತ್ತವನ್ನು ಹಿಂದಕ್ಕೆ ಪಡೆದುಕೊಳ್ಳಲು ಗ್ರಾಹಕರಿಗೆ ಸಾಧ್ಯವಾಗುವಂತೆ ನೋಡಿಕೊಳ್ಳುವಂತೆ ಆರ್ ಬಿ ಐ ಪೇಟಿಎಂ ಗೆ ಸೂಚಿಸಿದೆ.
ಫೆಬ್ರವರಿ 29ರಿಂದ ಹೊಸ ಠೇವಣಿಗಳು ಮತ್ತು ಟಾಪ್-ಅಪ್ ಗಳನ್ನು ಸ್ವೀಕರಿಸಬಾರದು ಎಂಬುದಾಗಿ ಜನವರಿ 31ರಂದು ಆರ್ ಬಿ ಐಯು ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್ ಗೆ ಆದೇಶ ನೀಡಿತ್ತು. ತನ್ನ ನಿರ್ದೇಶನಗಳನ್ನು ಪಾಲಿಸಲು ಪದೇ ಪದೇ ವಿಫಲವಾಗಿರುವುದಕ್ಕಾಗಿ ಆರ್ ಬಿ ಐ ಈ ಆದೇಶ ನೀಡಿತ್ತು.
ಗ್ರಾಹಕರು ತಮ್ಮ ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಂದ ಹಣ ಮತ್ತು ಕ್ಯಾಶ್ ಬ್ಯಾಕ್ ಗಳನ್ನು ಪಡೆಯುವುದನ್ನು ಮುಂದುವರಿಸಬಹುದು ಎಂದು ಆರ್ ಬಿ ಐ ತನ್ನ ಶುಕ್ರವಾರದ ಆದೇಶದಲ್ಲಿ ಹೇಳಿದೆ. ಆದರೆ, ಗ್ರಾಹಕರಿಗೆ ಮಾರ್ಚ್ 15ರ ಬಳಿಕ ವೇತನಗಳು, ಸಬ್ಸಿಡಿಗಳು ಮತ್ತು ಆಧಾರ್-ಜೋಡಿತ ನೇರ ಫಲಾನುಭವಿ ವರ್ಗಾವಣೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಆದರೆ, ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್ ನಿಂದ ಫಾಸ್ಟ್ಯಾಗ್ ಪಡೆದಿರುವ ಗ್ರಾಹಕರು ತಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿರುವ ಹಣವು ಮುಗಿಯುವವರೆಗೂ ಅವುಗಳನ್ನು ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಬಳಸಬಹುದಾಗಿದೆ.