ಕಳಪೆ ಜಿಡಿಪಿ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭವಿಷ್ಯ ಕುರಿತು ಊಹಾಪೋಹ ದಟ್ಟ
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ | PC : PTI
ಹೊಸದಿಲ್ಲಿ: ಇತ್ತೀಚಿಗೆ ಬಿಡುಗಡೆಗೊಂಡ ಕಳಪೆ ಜಿಡಿಪಿ ವರದಿಯು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ದಾಸ್ ಅಧಿಕಾರಾವಧಿ ಮುಂದಿನ ವಾರ ಅಂತ್ಯಗೊಳ್ಳಲಿದ್ದು, ಅದನ್ನು ಇನ್ನೂ ವಿಸ್ತರಿಸಲಾಗಿಲ್ಲ ಎಂದು Times of India ವರದಿ ಮಾಡಿದೆ.
ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ.5.4ರಷ್ಟಿದ್ದು,ಇದು ಕಳೆದ ಏಳು ತ್ರೈಮಾಸಿಕಗಳಲ್ಲಿ ಕನಿಷ್ಠವಾಗಿದೆ ಮತ್ತು ಆರ್ಬಿಐ ಅಂದಾಜಿಸಿದ್ದ ಶೇ.7ಕ್ಕಿಂತ ತೀರ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ದಾಸ್ ಭವಿಷ್ಯ ಕುರಿತು ಆರ್ಥಿಕ ತಜ್ಞರಲ್ಲಿ ಊಹಾಪೋಹಗಳು ಆರಂಭವಾಗಿವೆ. ಆರ್ಬಿಐ ಗವರ್ನರ್ ಆಗಿ ದಾಸ್ ಅವರ ಅಧಿಕಾರಾವಧಿ ವಿಸ್ತರಣೆಯ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆಯಾದರೂ ಬಡ್ಡಿ ದರ ಕಡಿತಕ್ಕೆ ಒತ್ತಡವನ್ನು ಹೆಚ್ಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಅವರ ಹುದ್ದೆಯ ಬಗ್ಗೆ ಇನ್ನಷ್ಟೇ ಸ್ಪಷ್ಟತೆಯನ್ನು ಒದಗಿಸಬೇಕಿದೆ.
ಸುದ್ದಿಸಂಸ್ಥೆಯು ಸಂಪರ್ಕಿಸಿದ್ದ 43 ಅರ್ಥಶಾಸ್ತ್ರಜ್ಞರ ಪೈಕಿ ಏಳು ಜನರನ್ನು ಹೊರತುಪಡಿಸಿ ಇತರರು ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿರುವ ಆರ್ಬಿಐ ಶೇ.6.5ರ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಿದ್ದಾರೆ. ಆರ್ಬಿಐ ಕಳೆದ ಸುಮಾರು ಎರಡು ವರ್ಷಗಳಿಂದಲೂ ರೆಪೋ ದರವನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಅಕ್ಟೋಬರ್ನಲ್ಲಿ ಆಹಾರ ಬೆಲೆಯೇರಿಕೆಯಿಂದಾಗಿ ಹಣದುಬ್ಬರವು ಸರಕಾರವು ನಿಗದಿಪಡಿಸಿದ್ದ ಶೇ.4 ಮತ್ತು ಶೇ.6ರ ನಡುವಿನ ಮಿತಿಯನ್ನು ಮೀರಿ 14 ತಿಂಗಳಲ್ಲಿ ಗರಿಷ್ಠ ಮಟ್ಟವಾದ ಶೇ.6.21ಕ್ಕೆ ಜಿಗಿದಿತ್ತು.
ಬೆಳವಣಿಗೆಯಲ್ಲಿ ಮಂದಗತಿಯು ಆರ್ಬಿಐಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ ಡಿಎಎಂ ಕ್ಯಾಪಿಟಲ್ ಅಡೈಸರ್ಸ್ ಲಿ.ನ ಅರ್ಥಶಾಸ್ತ್ರಜ್ಞೆ ರಾಧಿಕಾ ಪಿಪ್ಲಾನಿ,ಕಳಪೆ ಜಿಡಿಪಿಯ ಹಿಂದಿನ ಕಾರಣಗಳಿಗಾಗಿ ಮುಂದಿನ ದರ ನಿರ್ಧಾರಕ್ಕಾಗಿ ಆಸಕ್ತಿಯಿಂದ ಕಾಯಲಾಗುತ್ತದೆ. ಆರ್ಬಿಐ ಈಗಲೂ ಬಡ್ಡಿದರವನ್ನು ಕಡಿತಗೊಳಿಸದಿದ್ದರೆ ಫೆಬ್ರವರಿಯಲ್ಲಿ ಅದು ನಿರೀಕ್ಷೆಗಿಂತ ಹೆಚ್ಚಿನ ಕಡಿತವನ್ನು ಮಾಡುವುದು ಅನಿವಾರ್ಯವಾಗಬಹುದು ಎಂದು ಹೇಳಿದರು.
ಏರಿಳಿಕೆಯ ಆಹಾರ ಮತ್ತು ಇಂಧನ ಬೆಲೆಗಳನ್ನು ಹೊರತುಪಡಿಸಿ ಮುಖ್ಯಹಣದುಬ್ಬರವು ನಿಗ್ರಹದಲ್ಲಿರುವುದರಿಂದ ಬೆಳವಣಿಗೆಯಲ್ಲಿ ಕುಸಿತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯತ್ತಿರುವ ಪ್ರಮುಖ ಆರ್ಥಿಕತೆಯನ್ನು ಬೆಂಬಲಿಸಲು ಆರ್ಬಿಐ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆಯೇ ಎಂಬ ಬಗ್ಗೆ ಚರ್ಚೆಯನ್ನೂ ತೀವ್ರಗೊಳಿಸಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಾಣಿಜ್ಯ ಸಚಿವ ಪಿಯೂಷ ಗೋಯಲ್ ಅವರು ಇತ್ತೀಚಿನ ತಿಂಗಳುಗಳಲ್ಲಿ ಬಡ್ಡಿದರ ಕಡಿತಕ್ಕೆ ಕರೆಗಳನ್ನು ನೀಡಿದ್ದಾರೆ. ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಲ ನೀಡಿಕೆಯನ್ನು ಉತ್ತೇಜಿಸಲು ಆರ್ಬಿಐ ಇನ್ನಷ್ಟನ್ನು ಮಾಡಬಹುದು ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿಯಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಿದರೆ ಅದು ತಡವಾಗಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಬಿಐ ತಟಸ್ಥ ನೀತಿ ನಿಲುವನ್ನು ತಳೆದ ಬಳಿಕವೂ ದಾಸ್ ಕಳೆದ ತಿಂಗಳು ತಕ್ಷಣದ ಬಡ್ಡಿದರ ಕಡಿತದ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಹೆಚ್ಚುತ್ತಿರುವ ಜಾಗತಿಕ ಸರಕು ಬೆಲೆಗಳು ಮತ್ತು ಮುಂದುವರಿದಿರುವ ಭೂರಾಜಕೀಯ ಸಂಘರ್ಷಗಳಿಂದಾಗಿ ಹಣದುಬ್ಬರಕ್ಕೆ ಗಮನಾರ್ಹ ಅಪಾಯವಿದೆ ಎಂದು ಹೇಳಿದ್ದ ಅವರು,ವಿಶ್ವದ ಇತರ ಭಾಗಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯು ಸುಗಮವಾಗಿ ಸಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದರು.
ದಾಸ್ ಅಧಿಕಾರಾವಧಿ ಡಿ.10ಕ್ಕೆ ಅಂತ್ಯಗೊಳ್ಳಲಿದ್ದು ಫೆಬ್ರವರಿಯಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿಗೆ ಮೂವರು ಹಿರಿಯ ಆರ್ಬಿಐ ಅಧಿಕಾರಿಗಳ ಪೈಕಿ ಯಾರು ಸೇರ್ಪಡೆಗೊಳ್ಳಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. 2021ರಲ್ಲಿ ದಾಸ್ ಅಧಿಕಾರಾವಧಿಯನ್ನು ವಿಸ್ತರಿಸಿದಾಗ ಸರಕಾರವು ಅದನ್ನು ಒಂದು ತಿಂಗಳು ಮುಂಚಿತವಾಗಿಯೇ ಪ್ರಕಟಿಸಿತ್ತು.
ದರ ನಿಗದಿ ಸಮಿತಿ 2016ರಲ್ಲಿ ರಚನೆಗೊಂಡಾಗಿನಿಂದಲೂ ಅದರ ಸದಸ್ಯರಾಗಿರುವ ಆರ್ಬಿಐ ಡೆಪ್ಯೂಟಿ ಗವರ್ನರ್ ಮೈಕೇಲ್ ಪಾತ್ರಾ ಅವರ ಅಧಿಕಾರಾವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದೆ. ಅಕ್ಟೋಬರ್ನಲ್ಲಿ ಸರಕಾರವು ಹಣಕಾಸು ನೀತಿ ಸಮಿತಿಗೆ ಮೂವರು ಹೊಸ ಬಾಹ್ಯ ಸದಸ್ಯರನ್ನು ನೇಮಕಗೊಳಿಸಿತ್ತು