ತೆರಿಗೆ ಪಾವತಿಗಾಗಿ ಯುಪಿಐ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲು ಆರ್ಬಿಐ ಪ್ರಸ್ತಾವ
PC : PTI
ಹೊಸದಿಲ್ಲಿ : ತೆರಿಗೆ ಪಾವತಿಗಳಿಗಾಗಿ ಯುಪಿಐ ಮಿತಿಯನ್ನು ಒಂದು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲು ಆರ್ಬಿಐ ಪ್ರಸ್ತಾವಿಸಿದೆ. ಪ್ರಸ್ತಾವಿತ ಹೆಚ್ಚಳದಿಂದ ತೆರಿಗೆದಾರರು ತಮ್ಮ ಹೆಚ್ಚಿನ ತೆರಿಗೆ ಬಾಕಿಗಳನ್ನು ಯುಪಿಐ ಮೂಲಕ ನೇರವಾಗಿ ಪಾವತಿಸಲು ಸಾಧ್ಯವಾಗಲಿದೆ.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಪಾವತಿಗಳಿಗೆ ಭಿನ್ನವಾಗಿ ಯುಪಿಐ ವಹಿವಾಟುಗಳು ಸಾಮಾನ್ಯವಾಗಿ ಹೆಚ್ಚುವರಿ ಶುಲ್ಕಗಳನ್ನು ಹೊಂದಿರುವುದಿಲ್ಲ. ಇದು ಯುಪಿಐನ್ನು ತೆರಿಗೆದಾರರಿಗೆ ಹೆಚ್ಚು ಮಿತವ್ಯಯಿ ಆಯ್ಕೆಯನ್ನಾಗಿಸುತ್ತದೆ ಮತ್ತು ಅವರ ಒಟ್ಟಾರೆ ವೆಚ್ಚವನ್ನು ತಗ್ಗಿಸುತ್ತದೆ.
ಆರ್ಬಿಐ ವಿವಿಧ ಬಳಕೆ ಪ್ರಕರಣಗಳನ್ನು ಆಧರಿಸಿ ಬಂಡವಾಳ ಮಾರುಕಟ್ಟೆ,ಐಪಿಒ ಚಂದಾದಾರಿಕೆಗಳು, ಸಾಲ ಸಂಗ್ರಹ, ವಿಮೆ, ವೈದ್ಯಕೀಯ ಮತ್ತು ಶಿಕ್ಷಣ ಸೇವೆಗಳಂತಹ ವರ್ಗಗಳಿಗೆ ಮಿತಿಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತದೆ ಮತ್ತು ಹೆಚ್ಚಿಸುತ್ತದೆ.
ನೇರ ಮತ್ತು ಪರೋಕ್ಷ ತೆರಿಗೆ ಪಾವತಿಗಳು ಸಾಮಾನ್ಯ ಮತ್ತು ನಿಯಮಿತವಾಗಿರುವ ಮತ್ತು ಹೆಚ್ಚಾಗಿ ದೊಡ್ಡ ಮೊತ್ತವನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಯುಪಿಐ ಮೂಲಕ ತೆರಿಗೆ ಪಾವತಿಗಳಿಗೆ ಮಿತಿಯನ್ನು ಒಂದು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.