9760 ಕೋಟಿ ರೂ.ಮೌಲ್ಯದ 2,000 ರೂ.ನೋಟುಗಳು ವಾಪಸಾಗಿಲ್ಲ, ವಿನಿಮಯವೂ ಆಗಿಲ್ಲ: ಆರ್ಬಿಐ
Photo: PTI
ಹೊಸದಿಲ್ಲಿ: 9760 ಕೋ.ರೂ.ಮೌಲ್ಯದ 2,000 ರೂ.ನೋಟುಗಳು ಬ್ಯಾಂಕುಗಳಿಗೆ ವಾಪಸಾಗಿಲ್ಲ ಅಥವಾ ವಿನಿಮಯವೂ ಆಗಿಲ್ಲ ಎಂದು ಆರ್ಬಿಐ ಶುಕ್ರವಾರ ತಿಳಿಸಿದೆ. 2023,ಮೇ 19ರವರೆಗೆ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ,97.26ರಷ್ಟನ್ನು ಬ್ಯಾಂಕುಗಳಿಗೆ ಜಮೆ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
2,000 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಆರ್ಬಿಐ ಈ ವರ್ಷದ ಮೇ 19ರಂದು ಪ್ರಕಟಿಸಿತ್ತು.
ಮೇ 19ರಂದು ಚಲಾವಣೆಯಲ್ಲಿದ್ದ 2,000 ರೂ.ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ.ಗಳಾಗಿದ್ದು,ನ.30ರಂದು 9,760 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಆರ್ಬಿಐ ದೇಶಾದ್ಯಂತದ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ಜನರು 2,000 ರೂ. ನೋಟುಗಳನ್ನು ಜಮೆ ಮಾಡಲು ಅಥವಾ ವಿನಿಮಯಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಇದಕ್ಕೆ ಆರಂಭದಲ್ಲಿ 2023.ಸೆ.30ರವರೆಗೆ ಗಡುವು ನೀಡಲಾಗಿತ್ತಾದರೂ ಬಳಿಕ ಅದನ್ನು 2023,ಅ.7ರವರೆಗೆ ವಿಸ್ತರಿಸಲಾಗಿತ್ತು.
2,000 ರೂ.ನೋಟುಗಳು ಕಾನೂನುಬದ್ಧ ಮಾನ್ಯತೆಯನ್ನು ಹೊಂದಿವೆ ಎಂದು ಆರ್ಬಿಐ ಹೇಳಿದೆ.
ಬ್ಯಾಂಕ್ ಶಾಖೆಗಳಲ್ಲಿ 2,000 ರೂ.ನೋಟುಗಳ ವಿನಿಮಯಕ್ಕೆ ಗಡುವು ಅ.7ಕ್ಕೆ ಮುಕ್ತಾಯಗೊಂಡಿದ್ದರೂ,ಆರ್ಬಿಐನ 19 ವಿತರಣಾ ಕಚೇರಿಗಳಲ್ಲಿ ಈ ಸೌಲಭ್ಯವು ಮುಂದುವರಿದಿದೆ. ಇವು ಜನರಿಂದ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲೂ 2,000 ರೂ.ನೋಟುಗಳನ್ನು ಸ್ವೀಕರಿಸುತ್ತವೆ. ದೇಶದೊಳಗಿನ ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು 2,000 ರೂ.ನೋಟುಗಳನ್ನು ಅಂಚೆ ಕಚೇರಿಯ ಮೂಲಕ ಆರ್ಬಿಐನ ಯಾವುದೇ ವಿತರಣಾ ಕಚೇರಿಗೆ ಕಳುಹಿಸಬಹುದು ಎಂದು ಹೇಳಿಕೆಯು ತಿಳಿಸಿದೆ.