ಸಬ್ಸಿಡಿಗಳನ್ನು ತಾರ್ಕಿಕಗೊಳಿಸುವಂತೆ ಸರ್ಕಾರಗಳಿಗೆ ಆರ್ಬಿಐ ತಾಕೀತು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಹಲವು ರಾಜ್ಯಗಳು ಸಾಲ ಮನ್ನಾ, ಕೃಷಿ ಮತ್ತು ಗೃಹಬಳಕೆಗೆ ಉಚಿತ ವಿದ್ಯುತ್, ಉಚಿತ ಸಾರಿಗೆ ಮತ್ತು ಯುವಕರು ಹಾಗೂ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆಗಳನ್ನು ಘೋಷಿಸುತ್ತಿರುವ ಬಗ್ಗೆ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಇಂಥ ವೆಚ್ಚದಿಂದಾಗಿ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಲಭ್ಯವಾಗುವ ಹಣ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳು ಪೈಪೋಟಿಯಲ್ಲಿ ಮಹಿಳೆಯರು ಮತ್ತು ನಿರುದ್ಯೋಗಿ ಯುವಜನತೆಯನ್ನು ಗುರಿ ಮಾಡಿದ ಹಲವು ಯೋಜನೆಗಳು ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಎಚ್ಚರಿಕೆ ನೀಡಿದೆ. "ಅಧಿಕ ಸಾಲ-ಜಿಡಿಪಿ ಅನುಪಾತ, ಬಾಕಿ ಇರುವ ಜಾಮೀನುಗಳು ಮತ್ತು ಹೆಚ್ಚುತ್ತಿರುವ ಸಬ್ಸಿಡಿ ಹೊರೆಯಿಂದಾಗಿ ರಾಜ್ಯಗಳು ಅಭಿವೃದ್ಧಿಪರ ಮತ್ತು ಬಂಡವಾಳ ಹೂಡಿಕೆಗೆ ವಿತ್ತೀಯ ಕ್ರೋಢೀಕರಣವನ್ನು ಮಾಡಿಕೊಳ್ಳುವ ಅನಿವಾರ್ಯತೆಗೆ ಕಾರಣವಾಗಿವೆ" ಎಂದು ಪ್ರಸಕ್ತ ವರ್ಷದ ಬಜೆಟ್ ಗಳನ್ನು ಆಧರಿಸಿ ಸಿದ್ಧಪಡಿಸಿದ ರಾಜ್ಯಗಳ ಹಣಕಾಸು ಸ್ಥಿತಿಗತಿ ಕುರಿತ ವರದಿಯಲ್ಲಿ ವಿವರಿಸಲಾಗಿದೆ.
2018-19ರಿಂದ ರಾಜ್ಯಗಳು ನೀಡುವ ಸಬ್ಸಿಡಿ 2.5 ಪಟ್ಟು ಹೆಚ್ಚಿ ಪ್ರಸಕ್ತ ವರ್ಷದ ಬಜೆಟ್ ನಲ್ಲಿ 4.7 ಲಕ್ಷ ಕೋಟಿಗೆ ಏರಿವೆ.
ಆದರೂ ರಾಜ್ಯಗಳಲ್ಲಿ ಒಟ್ಟು ಹಣಕಾಸು ಗಾತ್ರ ಮತ್ತು ಕಂದಾಯ ವೆಚ್ಚದ ನಡುವಿನ ಅನುಪಾತಕ್ಕೆ ಸಂಬಂಧಿಸಿದಂತೆ ವಿತ್ತೀಯ ಕ್ರೋಢೀಕರಣದ ಪ್ರಯತ್ನಗಳನ್ನು ಆರ್ಬಿಐ ಒತ್ತಿಹೇಳಿದೆ. ಪಂಜಾಬ್ ಅತ್ಯಧಿಕ ಆರ್ಇಸಿಓ ದರ (ಶೇ. 17.1) ವನ್ನು ಹೊಂದಿದ್ದು, ಪುದುಚೇರಿ (14.1), ಕೇರಳ (10.6) ಮತ್ತು ದೆಹಲಿ (10.3) ಕೂಡಾ ಹೆಚ್ಚಿನ ಆರ್ಇಸಿಓ ಪ್ರಮಾಣ ಹೊಂದಿವೆ ಎಂದು ವಿವರಿಸಿದೆ. ದೊಡ್ಡ ಮೊತ್ತವು ಕಂದಾಯ ವೆಚ್ಚಕ್ಕೆ ಖರ್ಚಾದರೆ ಆಸ್ತಿ ಸೃಷ್ಟಿಯೇತರ ವೆಚ್ಚ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದರಲ್ಲಿ ದೊಡ್ಡ ಪಾಲು ಬಡ್ಡಿ ಪಾವತಿ, ವೇತನ, ಪಿಂಚಣಿ ಹಾಗೂ ರಾಜಕೀಯವಾಗಿ ಸೂಕ್ಷ್ಮ ಎನಿಸಿದ ಸಬ್ಸಿಡಿಗಳಿಗೆ ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿಗಳನ್ನು ಹೆಚ್ಚು ತಾರ್ಕಿಕಗೊಳಿಸುವಂತೆ ಸಲಹೆ ಮಾಡಿದೆ.